
(ಸಂಜೆವಾಣಿ ವಾರ್ತೆ)
ವಿಜಯಪುರ :ಜು.18: ಲಾಲ್‍ಬಹದ್ದೂರ ಶಾಸ್ತ್ರೀ ಜಲಾಶಯ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲಾ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಯವರ ಮುಖಾಂತರ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈ ಭಾರಿ ಮುಂಗಾರು ಹಂಗಾಮಿನಲ್ಲಿ ಆಗಬೇಕಿದ್ದ ಮಳೆ ಜುಲೈ ತಿಂಗಳು ಮುಗಿಯುತ್ತಾ ಬಂದರು ಮಳೆಯಾಗುತ್ತಿಲ್ಲ, ಇದರಿಂದ ಜಿಲ್ಲೆಯಲ್ಲಿ ಬೀಕರ ಬರಗಾಲ ಆವರಿಸಿದೆ. ಈ ಹಿಂದೆ ಭರ್ತಿ ಮಾಡಿದ ಜಿಲ್ಲೆಯ ಬಹತೇಕ ಕೆರೆಗಳಲ್ಲಿ ನೀರು ಬರಿದಾಗುತ್ತಿವೆ. ಇದರಿಂದ ಅಂತರ್ಜಲಮಟ್ಟ ಕುಸಿದು, ಕೊಳವೆ ಭಾವಿ ಹಾಗೂ ತೆರೆದ ಭಾವಿಗಳಲ್ಲಿ ನೀರು ಭತ್ತಿ ಹೋಗಿವೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗಾಗಲೇ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಲಾಲ್‍ಬಹದ್ದೂರ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಈ ಸದ್ಯ ಜಲಾಶಯದಲ್ಲಿ ಡೆಡ್ ಸ್ಟೋರೇಜ್ 17ಟಿಎಮ್.ಸಿ ಹೊರತುಪಡಿಸಿದರು 8 ಟಿಎಮ್‍ಸಿ ಲೈವ್ ಕೆಪಾಸಿಟಿ ಇದೆ. ಇದರಲ್ಲಿ ಕೇವಲ 1 ಟಿಎಮ್‍ಸಿ ನೀರು ಹರಿಸಿದರೆ ಸಾಕು ಎಲ್ಲಾ ಕೆರೆ ಕಟ್ಟೆಗಳು ಭರ್ತಿಯಾಗುತ್ತವೆ. ಆದ್ದರಿಂದ ತಕ್ಷಣ ಎಲ್ಲಾ ಕಾಲುವೆಗಳಿಗೆ ನೀರು ಹರಿಸಬೇಕೆಂದು ಮನವಿ ಮಾಡಿಕೊಂಡರು. ಒಂದು ವೇಳೆ ನೀರು ಪೂರೈಸದಿದ್ದರೆ ಆಲಮಟ್ಟಿಯ ಕೆಬಿಜೆಎನ್‍ಎಲ್ ಮುಖ್ಯ ಅಭೀಯಂತರರ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಹೊನಕೇರಪ್ಪ ತೆಲಗಿ, ಈರಣ್ಣ ದೇವರ ಗುಡಿ, ಈರಪ್ಪ ತೇಲಿ, ನಂದುಗೌಡ ಬಿರಾದಾರ, ಚನ್ನಬಸಪ್ಪ ಸಿಂಧೂರ, ಮಲ್ಲು ಕೊಗಟನೂರ, ಅರ್ಜುನ ಹಾವಗೊಂಡ, ಸಿಕಿಂದರ ಕರ್ಜಗಿ ಇನ್ನೀತರರು ಇದ್ದರು.