
ಸಂಜೆವಾಣಿ ನ್ಯೂಸ್
ಮೈಸೂರು: ಆ.13:- ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ವಾಡಿಕೆಗಿಂತ ಕಡಿಮೆ ಆಗಿದೆ. ಹೀಗಾಗಿ ಆಕ್ಟೋಬರ್ ವರೆಗೆ ಪ್ರತಿ ತಿಂಗಳು 15 ದಿನಗಳಿಗೆ ಒಮ್ಮೆ ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಬಿನಿ ಜಲಾಶಯ ಅಚ್ಚುಕಟ್ಟು ಪ್ರದೇಶಗಳಿಗೆ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ನೀರಾವರಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ನೀರಿನ ಲಭ್ಯತೆ ಅವಲೋಕಿಸಿದರೆ ಕಟ್ಟು ನೀರು ಪದ್ಧತಿ ಅನುಸರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಜಲಾಶಯದ ಒಳಹರಿವು 29.55 ಟಿಎಂಸಿ ಇದ್ದು, ಹೊರಹರಿವಿನ ಪ್ರಮಾಣ 14.081 ಟಿಎಂಸಿ ಇದೆ. ಸಾಧಾರಣವಾಗಿ ಕಬಿನಿ ಹಿನ್ನೀರಿನಲ್ಲಿ ಬೀಳುವ ಮಳೆಯ ಪ್ರಮಾಣ 1829.1 ಎಂ.ಎಂ.ಗಳಷ್ಟು ಆದರೆ ವಾಸ್ತವವಾಗಿ ಪ್ರಸಕ್ತ ಸಾಲಿನಲ್ಲಿ ಬಿದ್ದಿರುವ ಮಳೆಯ ಪ್ರಮಾಣ 881.0 ಎಂ.ಎಂ. ಇದೆ. ಇದರಿಂದಾಗಿ ಶೇ.52 ರಷ್ಟು ಮಳೆಯ ಕೊರತೆ ಉಂಟಾಗಿದೆ. ಉತ್ತಮ ಮಳೆಯಾದರೆ ಡಿಸೆಂಬರ್ ಅಂತ್ಯದವರೆಗೂ ನೀರು ಹರಿಸಬಹುದು ಎಂದು ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳ ಅವಧಿಗಿಂತಲೂ ಈ ಭಾರಿ ಜಲಾಶಯಕ್ಕೆ ಕಡಿಮೆ ಒಳಹರಿವು ಉಂಟಾಗಿದೆ. ಜಲಾಶಯದ ನೀರಿನ ಶೇಖರಣೆಯ ಪ್ರಮಾಣದಲ್ಲಿ ಆಗಸ್ಟ್ ತಿಂಗಳಿಂದ ಮೇ 2024ರವರೆಗೆ ಬೇಸಿಗೆ ಕಾಲಕ್ಕೆ ಬೆಂಗಳೂರು, ಮೈಸೂರು ಮತ್ತು ಇತರೆ ತಾಲ್ಲೂಕು ವ್ಯಾಪ್ತಿಗೆ ಕುಡಿಯುವ ನೀರಿನ ಆದ್ಯತೆಗೆ ಜಲಾಶಯದಿಂದ 6.13 ಟಿಎಂಸಿ ನೀರನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಕಬಿನಿ ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ 18.04 ಟಿಎಂಸಿ ಇದೆ. ಉಪಯುಕ್ತ ಸಂಗ್ರಹಣೆಯು 8.23 ಟಿಎಂಸಿ ಇದೆ. ಜುಲೈ 27ರಿಂದ ಆಗಸ್ಟ್ 5ರ ಹತ್ತು ದಿನಗಳ ಅವಧಿಗೆ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು 1.29 ಟಿಎಂಸಿ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ಕಬಿನಿ ಜಲಾಶಯದಿಂದ 1,08,060 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ಕಬಿನಿ ಬಲ ಮತ್ತು ಎಡದಂಡೆ ನಾಲೆಗಳಲ್ಲಿ 2390 ಕ್ಯೂಸೆಕ್ ಹಾಗೂ ಕುಡಿಯುವ ಅಣೆಕಟ್ಟು ನಾಲೆಗೆ 900 ಕ್ಯೂಸೆಕ್ ನೀರನ್ನು 120 ದಿನಗಳ ಅವಧಿಗೆ ಹರಿಸಲು 2.86 ಟಿಎಂಸಿ ನೀರಿನ ಅವಶ್ಯಕವಿದೆ ಎಂದು ವಿವರಿಸಿದರು.
ರೈತರ ವ್ಯವಸಾಯ ನಿಂತಿರುವುದೇ ನೀರಾವರಿ ವ್ಯವಸ್ಥೆಯಲ್ಲಿ. ನೀರಿನ ಸಮಸ್ಯೆ ಉಂಟಾಗಿ ರೈತರು ತೊಂದರೆಗೆ ಸಿಲುಕಬಾರದು. ನಾಲೆಯ ಪ್ರಾರಂಭದಿಂದ ಕೊನೆಯವರೆಗೂ ನೀರು ತಲುಪಬೇಕಾದರೆ ನೀರಿನ ನಿರ್ವಹಣೆಯು ವ್ಯವಸ್ಥಿತವಾಗಿರಬೇಕು. ನಾಲೆಯಲ್ಲಿ ಜಂಗಲ್ ಕಟ್ಟಿಂಗ್ ಹಾಗೂ ಹೂಳು ತೆಗೆಸಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಗೂ ಮುನ್ನ ರೈತರ ಸಮಸ್ಯೆಯನ್ನು ಆಲಿಸಿದ ಸಚಿವರು, ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನ ಆದೇಶದ ಜೊತೆಗೆ ನಮ್ಮ ಭಾಗದ ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ರೈತರು ಯಾವುದೇ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ರೈತರ ಹಿತರಕ್ಷಣೆಗೆ ಸರ್ಕಾರವು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೆಂದ್ರ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್, ಉಪಕಾರ್ಯದರ್ಶಿ ಸರಸ್ವತಿ, ಅಧೀಕ್ಷಕ ಎಂಜಿನಿಯರ್ ಶಿವಮಹದೇವಯ್ಯ, ಮುಖ್ಯ ಎಂಜಿನಿಯರ್ ವೆಂಕಟೇಶ್ ಸೇರಿದಂತೆ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.