ಕಾಲುಬಾಯಿ ಜ್ವರಕ್ಕೆ ರಾಸುಗಳ ಬಲಿ ಪರಿಹಾರಕ್ಕೆ ಹೆಚ್‌ಡಿಕೆ ಆಗ್ರಹ


ಬೆಂಗಳೂರು,ಜೂ. ೫- ರಾಜ್ಯದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದರೂ ಲಸಿಕಾ ಅಭಿಯಾನ ನಡೆಸಿಲ್ಲ ಎಂದು ದೂರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗೋ ರಕ್ಷಣೆ ಬಗ್ಗೆ ಹಾದಿಬೀದಿಯಲ್ಲಿ ಬಿಜೆಪಿ ಅರಸುತ್ತದೆಯೇ ಹೊರತು ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಈ ಲಸಿಕಾ ಅಭಿಯಾನ ನಡೆಸದಿರುವುದೇ ತಾಜಾ ಉದಾಹರಣೆ ಎಂದವರು ಟ್ವೀಟ್ ಮಾಡಿದ್ದಾರೆ.
ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಲ್ಲ. ರಾಜ್ಯಸರ್ಕಾರವು ಕೇಳುವ ಗೋಜಿಗೂ ಹೋಗಿಲ್ಲ. ಈ ಸಾಂಕ್ರಾಮಿಕದಿಂದ ಹಸುಗಳು ಸಾಯುತ್ತಿವೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ರಾಜ್ಯದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುಭಾಯಿ ರೋಗ ವ್ಯಾಪಕವಾಗಿದೆ. ಕಳೆದ ಅಕ್ಟೋಬರ್‌ನಲ್ಲೇ ಲಸಿಕಾ ಅಭಿಯಾನ ನಡೆಸಬೇಕಿತ್ತು. ಲಸಿಕೆ ಹಾಕದೆ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಗೋ ರಕ್ಷಣೆಯೇ. ಇದು ಗೋ ವಧೇಯಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಜೂನ್‌ನಲ್ಲಿ ಲಸಿಕಾ ಅಭಿಯಾನವನ್ನು ನಡೆಸಿ ಲಸಿಕೆ ಹಾಕುವಂತೆ ಅವರು ಒತ್ತಾಯಿಸಿ ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಪರಿಹಾರ ನೀಡುವಂತೆಯೂ ಆಗ್ರಹಿಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ರಾಸುಗಳಿಗೆ ಕಾಲುಬಾಯಿ ಜ್ವರ ಬಂದಿತ್ತು. ಆಗ ನಾನು ವೈಯಕ್ತಿಕವಾಗಿ ರೈತರಿಗೆ ಪರಿಹಾರ ನೀಡಿದ್ದೆ. ನಂತರ ಎಚ್ಚೆತ್ತ ಸರ್ಕಾರ ತಾನೂ ಪರಿಹಾರ ನೀಡಿತ್ತು. ಗೋವುಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿ, ಈಗ ಗೋವುಗಳ ರಕ್ಷಣೆ ಮಾಡಲಿ ಎಂದು ಅವರು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.