ಕಾಲಿಗೆ ಸರಪಳಿ ಬಿಗಿದು ಪದ್ಮಾಸನ ಹಾಕಿ ಈಜಿ ದಾಖಲೆ ನಿರ್ಮಾಣ

ಮಂಗಳೂರು: ಸಾಧನೆ ಮಾಡ ಬೇಕು ಎಂದು ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಬ್ಬ ವ್ಯಕ್ತಿ ಕಾಲಿಗೆ ಸರಪಳಿ ಬಿಗಿದು, ಪದ್ಮಾಸನ ಹಾಕಿಕೊಂಡು ಈಜುವ ಮೂಲಕ ಗಿನ್ನಿಸ್ ದಾಖಲೆಗೆ ಭಾಜನರಾಗಿದ್ದಾರೆ.
ತನ್ನ ಜೀವದ ಹಂಗನ್ನು ತೊರೆದು ಸಾಧನೆ ಮಾಡಬೇಕೆಂಬ ಛಲದಿಂದ ರಕ್ಕಸ ಸಮುದ್ರದ ಅಲೆಗಳನ್ನು ಲೆಕ್ಕಿಸದೇ ಈಜುವ ಮೂಲಕ ನಾಗರಾಜ ಖಾರ್ವಿ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ವೃತ್ತಿಯಲ್ಲಿ ಶಿಕ್ಷಕರು. ಬಾಲ್ಯದಿಂದಲೇ ಈಜು ಬಲ್ಲವರಾಗಿದ್ದ ಇವರು ಅನೇಕ ವಿದ್ಯಾರ್ಥಿಗಳಿಗೆ ಈಜು ತರಬೇತಿಯನ್ನು ನೀಡಿದ್ದಾರೆ. ಜೊತೆಗೆ ಹಲವು ವರ್ಷಗಳ ಹಿಂದೆಯೇ ಯೋಗಾಭ್ಯಾಸವನ್ನು ಕಲಿತಿದ್ದರು.ಈಜುವದರಲ್ಲಿ ಯೋಗವನ್ನು ಏಕೆ ಅಳವಡಿಕೆ ಮಾಡಿಕೊಳ್ಳಬಾರದು ಎನ್ನುವ ಯೋಚನೆಯಂತೆ ಪದ್ಮಾಸನ ಹಾಕಿಕೊಂಡು ಈಜಲು ಅಭ್ಯಾಸ ಮಾಡಲಾರಂಭಿಸಿದರು. ಅದರ ಫಲವಾಗಿಯೇ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸನಲ್ಲಿ ಈ ಸಾಧನೆ ದಾಖಲಾಗಿದೆ.
ಪ್ರವಾಸಿಗರ ಮೆಚ್ಚಿನ ಬೀಚ್ ತಣ್ಣೀರುಬಾವಿಯಲ್ಲಿ ಕುತೂಹಲದಿಂದ ನೆರೆದಿದ್ದ ಜನರ ನಡುವೆ ನಾಗರಾಜ ಖಾರ್ವಿ ಅವರು ಕಡಲಿನಲ್ಲಿ ಸಾಧನೆ ಮಾಡಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿಯೇ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಆಳವಾದ ಸಮುದ್ರಕ್ಕೆ ಇಳಿದೇ ಬಿಟ್ಟರು.
ಬ್ರೆಸ್ಟ್ ಸ್ಟ್ರೋಕ್ ಮೂಲಕ ಈಜುತ್ತ ೧ ಕಿಮಿ ದೂರದ ಗುರಿಯನ್ನು ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಲಗ್ಗೆ ಇಟ್ಟರು. ಸಮುದ್ರದ ಅಬ್ಬರ ಅಲೆಗಳ ಒತ್ತಡದ ಮಧ್ಯೆಯೂ ನಾಗರಾಜ ಖಾರ್ವಿ ೨೫. ೧೬ ನಿಮಿಷಗಳಲ್ಲಿ ಗುರಿ ತಲುಪಿ ನೆರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದರು.
ನಾಗರಾಜ ಖಾರ್ವಿ ಅವರು ಈ ರೀತಿಯ ಸಾಧನೆಯನ್ನು ಮಾಡುತ್ತಿರುವದು ಇದೇ ಮೊದಲೇನಲ್ಲ. ಈ ಹಿಂದೆಯೂ ನಾಗರಾಜ ಖಾರ್ವಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಗುರುಗಳಾದ ಬಿ ಕೆ ನಾಯಕ್ ಅವರ ಸಹಾಯದಿಂದ ಲಿಮ್ಕಾ ದಾಖಲೆಗೂ ಕಾಲಿಟ್ಟಿದ್ದಾರೆ.ಇದೇ ಸ್ಫೂರ್ತಿಯಿಂದ ಯೋಗಾಸನಕ್ಕೂ ಅಗತ್ಯ ಪ್ರೋತ್ಸಾಹ ಸಿಗಬೇಕೆನ್ನುವ ನಿಟ್ಟಿನಲ್ಲಿ ಪದ್ಮಾಸನ ಮೂಲಕ ತಣ್ಣೀರು ಬಾವಿ ಬೀಚಿನಲ್ಲಿ ವಿಶಿಷ್ಟ ಸಾಧನೆಗೈದರು.ಈ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇವೆಲ್ಲಕ್ಕೂ ಮಿಗಿಲಾಗಿ ನಾಗರಾಜ ಖಾರ್ವಿ ಅವರ ಗುರುಗಳೇ ಮುಂದೆ ನಿಂತು ಶಿಷ್ಯನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾದರೂ ಈಜುಗಾರಿಕೆಯಲ್ಲಿ ಇವರು ತೋರಿಸಿರುವ ಸಾಧನೆಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.