ಕಾಲಮಿತಿಯೊಳಗೆ ಯೋಜನೆಗಳ ಅನುದಾನ ಸದ್ಬಳಕೆಗೆ ಸಚಿವರ ಸೂಚನೆ

ತುಮಕೂರು, ಜ. ೯- ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ೨೦೨೦-೨೧ನೇ ಸಾಲಿನಲ್ಲಿ ನಿಗದಿಯಾಗಿರುವ ಕಾರ್ಯಕ್ರಮಗಳನ್ನು, ಯೋಜನೆ, ಕಾಮಗಾರಿಗಳನ್ನು ಫೆ.೧೫ ರೊಳಗೆ ಪೂರ್ಣಗೊಳಿಸಿ ಅನುದಾನವನ್ನು ಖರ್ಚು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ೨೦೨೦-೨೧ನೇ ಸಾಲಿನ ೩ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೨೦-೨೧ನೇ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ಸುಮಾರು ೬೦೦ ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ಅನುಮೋದನೆಗೊಂಡಿದ್ದು, ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಫೆ.೧೫ ರೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅನುದಾನ ಖರ್ಚು ಮಾಡಬೇಕು ಎಂದು ಪಿಆರಿಡಿಯ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದರೂ ಕಾಮಗಾರಿ ಅನುಷ್ಠಾನಕ್ಕೆ ನಿರ್ಲಕ್ಷ್ಯತೆ ತೋರಿರುವುದು ಕಂಡು ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸಗಳು ಆಗುವುದಿಲ್ಲ. ಎಸ್‌ಸಿಪಿ, ಟಿಎಸ್‌ಪಿ, ಲಿಂಕ್ ಡಾಕ್ಯುಮೆಂಟ್ ಸೇರಿದಂತೆ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ಗೊಂಡಿರುವ ಕಾಮಗಾರಿಗಳನ್ನು ಫೆ.೧೫ ರೊಳಗೆ ಪೂರ್ಣಗೊಳಿಸಿ ಹಣವನ್ನು ಖರ್ಚು ಮಾಡಿ, ಇಲ್ಲದಿದ್ದರೆ ನಿಯಾಮಾನುಸಾರ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಓ ಶುಭಾಕಲ್ಯಾಣ್ ಅವರಿಗೆ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆ, ನಿರ್ಮಿತಿಕೇಂದ್ರ, ಕೃಷಿ ಇಲಾಖೆ, ಪಶುಪಾಲನೆ, ಮೀನುಗಾರಿಕೆ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳು ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ, ಅನುದಾನ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಹಾಗೂ ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿನ ಬಹುತೇಕ ಇಲಾಖೆಗಳ ಕಾಮಗಾರಿಗಳು ಆರಂಭವೇ ಆಗಿಲ್ಲ, ಕಾಮಗಾರಿಗಳನ್ನು ಸಂಪೂರ್ಣವಾಗಿ ಕಾಲಮಿತಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಚಿವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸದೇ ಇರುವ ೮೭ ಶುದ್ಧ ಕುಡಿಯುವ ನೀರು ಘಟಕಗಳನ್ನು ರಿಪೇರಿ ಮಾಡಿ, ಕಾರ್ಯನಿರ್ವಹಿಸುವ ಹಂತಕ್ಕೆ ತಂದು ನಿಲ್ಲಿಸಿ, ನಂತರ ತಿಪಟೂರು ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಸ್ವಯಂ ಸೇವಾ ಸಂಘಗಳು/ಗ್ರಾಮ ಪಂಚಾಯ್ತಿಗಳಿಗೆ ನಿರ್ವಹಣೆಗಾಗಿ ವಹಿಸಿಕೊಡಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ ಹೊಸದಾಗಿ ಹುಳಗಳ ಬಾಧೆ ಕಂಡು ಬಂದಿದ್ದು, ಈ ಬಗ್ಗೆ ತಜ್ಞರನ್ನು ಜಿಲ್ಲೆಗೆ ಕರೆದುಕೊಂಡು ಬಂದು ಪರೀಕ್ಷಿಸಲಾಗಿದೆ. ಇನ್ನೂ ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲಿದ್ದು, ಭಯಪಡುವ ಅಗತ್ಯವಿಲ್ಲವೆಂದು ತಿಳಿಸಿರುತ್ತಾರೆ. ಆದರೂ, ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತೋಟ
ಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಸರಗೋಡಿನ ಸಂಶೋಧನಾ ಕೇಂದ್ರದ ತಜ್ಞರೊಂದಿಗೆ ಈ ಬಗ್ಗೆ ಸಮಾಲೋಚಿಸಿ, ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಶಾಲಾ-ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿಗಳ ಅನುಕೂಲದ ಹಿತದೃಷ್ಠಿಯಿಂದ ಸಂಪೂರ್ಣವಾಗಿ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಆರಂಭಿಸಬೇಕು, ನೂತನ ಬಸ್ ಪಾಸ್ ಕೊಡುವ ವ್ಯವಸ್ಥೆ ಆಗಬೇಕು. ಒಂದು ವೇಳೆ ನೂತನ ಪಾಸ್ ಒದಗಿಸುವ ವ್ಯವಸ್ಥೆ ಶೀಘ್ರವಾಗಿ ಆಗದಿದ್ದಲ್ಲಿ ಹಳೆ ಪಾಸ್‌ಗಳನ್ನೇ ಪರಿಗಣಿಸುವಂತೆ ತುಮಕೂರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಗಳಲ್ಲಿ ನೋಂದಣಿಯಾದ ಗರ್ಭಿಣಿಯರ ಸಂಖ್ಯೆಗಿಂತ ಹೆರಿಗೆ ಪ್ರಮಾಣ ಕೆಲವು ಆಸ್ಪತ್ರೆಗಳಲ್ಲಿ ಕಡಿಮೆಯಾಗಿದ್ದರೆ, ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ನೋಂದಣಿಗಿಂತ ಹೆಚ್ಚು ಹೆರಿಗೆಗಳಾಗಿವೆ. ಹಾಗಾಗಿ ನೋಂದಣಿ ಪ್ರಮಾಣದಲ್ಲಿ ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲೇ ಹೆರಿಗೆಗಳಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಕುಣಿಗಲ್ ತಾಲ್ಲೂಕಿಗೆ ಬರಬೇಕಾದ ನೀರು ಇನ್ನೂ ಬಂದಿಲ್ಲ ಎಂದು ಕುಣಿಗಲ್ ಶಾಸಕ ರಂಗನಾಥ್ ಅವರು ಸಚಿವರ ಗಮನಕ್ಕೆ ತಂದಾಗ, ಜಿಲ್ಲೆಗೆ ಹೇಮಾವತಿಯಿಂದ ಹತ್ತನೇ ತಾರೀಖಿನವರೆಗೂ ನೀರನ್ನು ಹರಿಸುವಂತೆ ಹೇಮಾವತಿ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ತುರುವೇಕೆರೆಯಲ್ಲಿ ಬಹಳಷ್ಟು ಅಂಗನವಾಡಿ ಕಟ್ಟಡಗಳ ನಿರ್ಮಾಣ ಪೂರ್ಣವಾಗಿಲ್ಲ ಎಂದು ಶಾಸಕ ಜಯರಾಮ್ ಹೇಳಿದಾಗ, ಸ್ಥಳ ಪರಿಶೀಲನೆ ಮಾಡಿ ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜ್, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ರಾಜೇಶ್ ಗೌಡ, ಚಿದಾನಂದ್‌ಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಸಚಿವರ ಸ್ಪಷ್ಟನೆ
ಜನವರಿ ೪ರಂದು ಅಧಿಕಾರಿಗಳಿಗೆ ಪೂರ್ವಭಾವಿ ಸಭೆ ಕರೆದು, ಜನವರಿ ೭ ರೊಳಗೆ ಕಾಮಗಾರಿ ಆರಂಭಿಸಲು ಸೂಚಿಸಲಾಗಿತ್ತು. ಆದರೆ, ಈವರೆಗೆ ಒಂದೇ ಒಂದು ಕಾಮಗಾರಿ ಆರಂಭಿಸಿಲ್ಲ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯ ಕಾಮಗಾರಿಗಳನ್ನು ಫೆ.೧೫ ರೊಳಗೆ ಸದ್ಬಳಕೆ ಮಾಡಿಕೊಳ್ಳದಿದ್ದರೆ ವ್ಯರ್ಥವಾಗಲಿದೆ. ಕಳೆದ ವರ್ಷ ಇದೇ ರೀತಿ ಮಾಡಿ ೧೧ ಕೋಟಿ ಜಿಲ್ಲೆಗೆ ನಷ್ಟವಾಗಿದೆ.
ಕೆರೆಗಳ ಅಭಿವೃದ್ಧಿಗೆ ಮೀಸಲಾಗಿದ್ದ ಅನುದಾನವನ್ನು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ಒಂದೇ ಒಂದು ಹೊಸ ಕಾಮಗಾರಿಯನ್ನೂ ಆರಂಭಿಸಿಲ್ಲದ ಪರಿಣಾಮ ಇಂಜಿನಿಯರ್‌ಗಳಿಗೆ ಏರು ಧ್ವನಿಯಲ್ಲಿ ಮಾತನಾಡಿದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.