
ಕಲಬುರಗಿ.ಮಾ.07: ಕಾಲಮಿತಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪ್ರಮುಖ ಪ್ರೊ. ನಿರಂಜನ್ ಆರಾಧ್ಯ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2010ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯು ರಾಷ್ಟ್ರದಲ್ಲಿ ಜಾರಿಗೆ ಬಂದಿದೆ. ಆದಾಗ್ಯೂ, ಕರ್ನಾಟಕದಲ್ಲಿ ಮಾತ್ರ ಇಲ್ಲಿಯವರೆಗೆ 10 ಅಂಶಗಳನ್ನು ಒಳಗೊಂಡ ಶಿಕ್ಷಣದ ಹಕ್ಕು ಕಾಯ್ದೆಯು 100ರಲ್ಲಿ ಕೇವಲ 23 ಶಾಲೆಗಳಲ್ಲಿ ಮಾತ್ರ ಜಾರಿಯಲ್ಲಿದೆ. ಇದನ್ನು ಪರಿಗಣಿಸಿದರೆ ಕಾಯ್ದೆ ಸಂಪೂರ್ಣ ಜಾರಿಯಾಗಲು 36 ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಆ ವಿದ್ಯಾರ್ಥಿಗಳ ಕಲಿಕಾ ಅವಧಿಯು ಪೂರ್ಣಗೊಂಡಿರುತ್ತದೆ ಎಂದರು.
ಇತ್ತೀಚೆಗಂತೂ ಶಿಕ್ಷಣದ ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಜ್ವಲಂತ ಸಮಸ್ಯೆಗಳನ್ನು ನಿವಾರಿಸುವುದನ್ನು ಬಿಟ್ಟು ಜಾತಿ, ಜಾತಿಗಳ ಮಧ್ಯೆ ವಿಷಬೀಜವನ್ನು ಬಿತ್ತಿ ಕೋಮು ಗಲಭೆಗೆ ಕುಮ್ಮಕ್ಕು ಕೊಟ್ಟು ರಾಜಕೀಯವಾಗಿ ಶಿಕ್ಷಣವನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.
ಶಿಕ್ಷಣಕ್ಕಾಗಿ ಸರ್ಕಾರವು ಶೇಕಡಾ 15ರಷ್ಟು ಆಯವ್ಯಯದಲ್ಲಿ ಮೀಸಲಿಡಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ಶಿಕ್ಷಣದ ಮೂಲಭೂತ ಹಕ್ಕುಗಳಿಗೆ ಇಲ್ಲಿಯವರೆಗೆ ಶೇಕಡಾ 13.5ರಷ್ಟು ಹಣ ನಿಗದಿಪಡಿಸಿತ್ತು. ಆದಾಗ್ಯೂ, ಈ ಬಾರಿ ಶೇಕಡಾ 10ಕ್ಕೆ ಇಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಶೂ, ಸಮವಸ್ತ್ರ, ಆಟೋಪಕರಣಗಳು, ಪೀಠೋಪಕರಣಗಳು, ಶೌಚಾಲಯ, ಶುದ್ಧ ಕುಡಿಯುವ ನೀರು, ವಿಶಾಲವಾದ ಮೈದಾನ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಅಂದಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸಾಧ್ಯ. ಅಲ್ಲದೇ ಮೂಲಭೂತ ಸೌಲಭ್ಯಗಳು ಇದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ಹೇಳಿದರು.
ಶಿಕ್ಷಣ ಸಚಿವರನ್ನು ಅತ್ಯಂತ ಯೋಗ್ಯರನ್ನು ನೇಮಕ ಮಾಡಬೇಕು. ಅದನ್ನು ಬಿಟ್ಟು ಪ್ರಜಾಸತ್ತಾತ್ಮಕವಲ್ಲದ ನಿರ್ಧಾರಗಳನ್ನು ಕೈಗೊಳ್ಳುವವರಿಗೆ ಯಾವುದೇ ಕಾರಣಕ್ಕೂ ಶಿಕ್ಷಣ ಸಚಿವ ಸ್ಥಾನವನ್ನು ಕೊಡಬಾರದು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಪರಮೇಶ್ವರ್ ದೇಸಾಯಿ, ಜಗದೇವಿ, ಆನಂದರಾಜ್, ಮಸ್ತಾನಸಾಬ್, ಸುನೀಲ್ ಹುಡಗಿ, ರಾಜೇಂದ್ರ ರಾಜವಾಳ್, ಜಿಶಾನ್ ಮುಂತಾದವರು ಉಪಸ್ಥಿತರಿದ್ದರು.