ಕಾಲಮಿತಿಯಲ್ಲಿ ವೇತನ ಆಯೋಗ ಜಾರಿಗೊಳಿಸಿ:ವೈಎಎನ್

ಕೋಲಾರ,ಜು,೯- ವೇತನ ಆಯೋಗದ ವರದಿ ನೀಡಲು ೬ ತಿಂಗಳ ಕಾಲಾವಕಾಶ ಕೇಳಿದ್ದು, ಆ ವರದಿ ಬಂದ ನಂತರ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್‌ನಲ್ಲಿ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದರು.
ಸರ್ಕಾರ ಕನಿಷ್ಟ ೫ ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುವುದು ವಾಡಿಕೆ, ಈಗಾಗಲೇ ೬ ವರ್ಷ ಮುಗಿದಿದೆ, ಈ ನಡುವೆ ಆಯೋಗದ ವರದಿ ನೀಡಲು ೬ ತಿಂಗಳು ಅವಕಾಶ ನೀಡಿರುವುದು ಸರಿಯಲ್ಲ, ಶೀಘ್ರ ವರದಿ ತರಿಸಿಕೊಂಡು ಜಾರಿ ಮಾಡಿ ಎಂದು ನಾರಾಯಣಸ್ವಾಮಿ ಮನವಿ ಮಾಡಿದರು.
ವೇತನ ಆಯೋಗ ಜಾರಿ ಕುರಿತು ಮುಖ್ಯಮಂತ್ರಿ ನೀಡಿರುವ ಉತ್ತರದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬೆಳಕಿನಲ್ಲಿ ಪರಿಶೀಲಿಸಿ ನಿಯಮಾನುಸಾರ ಜಾರಿ ಮಾಡುವುದಾಗಿ ಹೇಳಿದ್ದು, ಗ್ಯಾರಂಟಿಗಳ ಜಾರಿಯಿಂದಾಗಿ ವಿಳಂಬವಾಗುವ ಆತಂಕ ಕಾಡುತ್ತಿದೆ, ನೌಕರರು ನಿಮ್ಮ ಸರ್ಕಾರದ ಕಡೆ ಆಸೆಯ ಕಂಗಳಿಂದ ನೋಡುತ್ತಿದ್ದಾರೆ, ಶೀಘ್ರ ಜಾರಿ ಮಾಡಿ ಎಂದರು.
ಕೇಂದ್ರ ಸಮಾನ ವೇತನ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ನಿಯಮಗಳು ಮತ್ತು ರಾಜ್ಯ ಸರ್ಕಾರದ ನೌಕರರಿಗೆ ಅನ್ವಯಿಸುವುದಿಲ್ಲ, ಅಲ್ಲದೆ ಕೇಂದ್ರ ಸರ್ಕಾರದ ಹುದ್ದೆಯ ಸ್ವರೂಪ, ಸೇವಾ ನಿಬಂಧನೆಗಳು ಇತ್ಯಾದಿ ಅಂಶಗಳು ರಾಜ್ಯ ಸರ್ಕಾರದ ಹುದ್ದೆಗಳ ಸ್ವರೂಪ ಮತ್ತು ಸೇವಾ ನಿಬಂಧನೆಗಳು ಪರಸ್ಪರ ಭಿನ್ನವಾಗಿದ್ದು, ಒಂದನ್ನೊಂದು ಹೋಲಿಕೆ ಮಾಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ೭.೬೦ ಲಕ್ಷ ಹುದ್ದೆಗಳಿದ್ದು, ಅದರಲ್ಲಿ ೨.೫೩ ಲಕ್ಷ ಹುದ್ದೆಗಳೂ ಖಾಲಿ ಇವೆ, ಉಳಿದ ೫.೧೧ ಲಕ್ಷ ನೌಕರರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ನಮ್ಮ ಸರ್ಕಾರ ವೇತನ ಆಯೋಗ ರಚಿಸಿ ಶೇ.೧೭ ಮಧ್ಯಂತರ ಪರಿಹಾರ ನೀಡಿದೆ, ಹೊಸ ಸರ್ಕಾರ ಬಂದ ನಂತರ ಶೀಘ್ರ ವರದಿ ಜಾರಿಯ ಆಸೆ ನೌಕರರಲ್ಲಿತ್ತು, ಆದರೆ ೬ ತಿಂಗಳು ವಿಸ್ತರಣೆ ಮಾಡಿರುವುದು ಸರಿಯಲ್ಲ ಎಂದು ವೈಎಎನ್ ಹೇಳಿದರು.