ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣ-ಸದಸ್ಯರ ಸಹಕಾರ ಅಗತ್ಯ

ಪುತ್ತೂರು, ನ.೧೩-  ಪ್ರಸ್ತಾವನೆಗೊಳಿಸಿದ ಕಾಮಗಾರಿಗಳನ್ನು ಬದಲಾವಣೆ ಮಾಡಿದಲ್ಲಿ ಮತ್ತೊಮ್ಮೆ ಆ ಕಾಮಗಾರಿಯನ್ನು ಸಾಮಾನ್ಯ ಸಭೆಯಲ್ಲಿ ಅಂಗೀಕಾರ ಮಾಡಬೇಕಾಗಿರುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಇಂದಿನ ವಿಶೇಷ ಸಭೆಯಲ್ಲಿಯೇ ಎಲ್ಲವನ್ನೂ ಕಾಮಗಾರಿ ಪಟ್ಟಿಯನ್ನೂ ಪೂರ್ಣಗೊಳಿಸಿ, ಅಗತ್ಯವಿದ್ದರೆ ಮಾತ್ರ ಬದಲಾವಣೆಯನ್ನು ತಿಳಿಸಿ ಎಂದು ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಅವರು ತಾಪಂ ಸದಸ್ಯರಿಗೆ ಸೂಚಿಸಿದರು.

ಪುತ್ತೂರು ತಾಲೂಕು ಪಂಚಾಯತ್‌ನ ವಿಶೇಷ ಸಾಮಾನ್ಯ ಗುರುವಾರ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮುಂದೆ ಸಭೆ ನಡೆಸಿ ಮಂಜೂರಾತಿಗೊಳಿಸಲು ನೀತಿ ಸಂಹಿತೆ ಕಾರಣದಿಂದ ಅವಕಾಶವಾಗದಿರಬಹುದು. ಅದರಿಂದಾಗಿ ಮಂಜೂರಾದ ಕಾಮಗಾರಿಗಳ ಬದಲಾವಣೆಯೊಂದಿಗೆ ಶೀಘ್ರ ಅನುಷ್ಠಾನ ಮಾಡಬೇಕಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. 

ಸದಸ್ಯರು ತಮ್ಮ ಕ್ಷೇತ್ರದಲ್ಲಿ ಮಂಜೂರಾಗಿರುವ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸುವುದಾದರೆ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಒಂದೆರಡು ಲಕ್ಷ ರೂ. ವೆಚ್ಚದ ಯೋಜನೆಗಳನ್ನು ನರೇಗಾ ಯೋಜನೆಯೊಂದಿಗೆ ಜೋಡಿಸಿಕೊಂಡು ಅನುಷ್ಠಾನಗೊಳಿಸಬಹುದಾಗಿದೆ. ಚುನಾವಣೆ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆಗಳು ಜಾರಿಯಾಗುವುದರಿಂದ ಯೋಜನೆಯನ್ನು ಪೂರ್ಣಗೊಳಿಸಲು ಕಷ್ಟಸಾಧ್ಯವಾಗುವುದರಿಂದ ಆದಷ್ಟು ಶೀಘ್ರದಲ್ಲಿ ಈ ಕುರಿತು ನಿರ್ಧರಿಸಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂಬರುವ ಮಾರ್ಚ್‌ವರೆಗೆ ಕಾಯುವುದಕ್ಕಿಂತ ಮುಂಬರುವ ಫೆಬ್ರವರಿ ತಿಂಗಳೊಳಗೆ ಮಾಡಿ ಮುಗಿಸುವುದು ಉತ್ತಮ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದರು.

ತಾಲೂಕಿನಲ್ಲಿ ೨೬ ಅಂಗನವಾಡಿಗಳಿಗೆ ಕಟ್ಟಡ ದುರಸ್ತಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಈ  ಪೈಕಿ ಕೆಲವೊಂದು ತುರ್ತು ಅಗತ್ಯ ಅಂಗನವಾಡಿ ಕಟ್ಟಡಗಳ ದುರಸ್ತಿ ಕೆಲಸ ನಡೆಸಬೇಕಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ನೀರಕಟ್ಟೆ ಅಂಗನವಾಡಿ ೨೦ ವರ್ಷ ಹಳೆಯದಾಗಿದ್ದು, ತೀರಾ ನಾದುರಸ್ತಿಯಲ್ಲಿದೆ. ಈ ಕಟ್ಟಡವನ್ನು ದುರಸ್ತಿಗೊಳಿಸುವ ಬದಲು ಅಲ್ಲಿಗೆ ಹೊಸ ಕಟ್ಟಡ ಮಂಜೂರಾತಿಗೊಳಿಸಬೇಕು ಎಂದು ಸದಸ್ಯ ಮುಕುಂದ ಅವರು ತಿಳಿಸಿದರು.

ಕಾಮಗಾರಿಗಳಿಗಳನ್ನು ನರೇಗಾದೊಂದಿಗೆ ಸಂಯೋಜನೆಗೊಳಿಸಿ ನಡೆಸಿದಲ್ಲಿ ಹೆಚ್ಚಿನ ಅನುದಾನ ಬಳಕೆಗೆ ಹಾಗೂ ನರೇಗಾ ಪ್ರಗತಿಗೂ ಸಹಕಾರಿಯಾಗಲಿದ್ದು, ಈ ನಿಟ್ಟಿನಲ್ಲಿ ಅವಕಾಶವಿರುವ ರಸ್ತೆ ಇನ್ನಿತರ ಕಾಮಗಾರಿಗಳಲ್ಲಿ ನರೇಗಾ ಸಂಯೋಜನೆಗೊಳಿಸುವಂತೆ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದರು.

ಸದಸ್ಯರಾದ ಹರೀಶ್ ಬಿಜತ್ರೆ, ಮೀನಾಕ್ಷಿ ಶಾಂತಿಗೋಡು, ಫೌಝಿಯಾ ಇಬ್ರಾಹಿಂ, ಎಂ.ಎಸ್ ಮುಕುಂದ, ಲಕ್ಷ್ಮಣ ಗೌಡ, ಶಿವರಂಜನ್, ಭವಾನಿ ಚಿದಾನಂದ ಮತ್ತಿತರರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.

ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.