ಕಾಲಕಾಲಕ್ಕೆ ಜಾತಿ, ಜನಗಣತಿ ನಡೆಯಲಿ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.10:- ರಾಷ್ಟ್ರದ ಸಂಪತ್ತು ಸಮಾನವಾಗಿ ಹಂಚಿಕೆಯಾಗಲು ಕಾಲ ಕಾಲಕ್ಕೆ ಜನ ಗಣತಿ ಮತ್ತು ಜಾತಿ ಗಣತಿ ಆಗಲೇಬೇಕು ಇದರಿಂದ ಮಾತ್ರ ನಿಗದಿತ ಸಮುದಾಯಗಳಿಗೆ ಮತ್ತು ಜನ ಸಾಮಾನ್ಯರಿಗೆ ಆರ್ಥಿಕ ನ್ಯಾಯ ಸಿಗಲು ಸಾಧ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಹೇಳಿದರು.
ನಗರದ ರಮಾಗೋವಿಂದ ರಂಗಮಂದಿರದಲ್ಲಿ ಏರ್ಪಡಿಸಿದ್ದ ಒಡಲು ಟ್ರಸ್ಟ್ ಉದ್ಘಾಟನೆ ಹಾಗೂ ವಿಚಾರ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಜನಸಾಮಾನ್ಯರಿಗೆ ಇನ್ನೂ ಕೂಡ ಸಂಪೂರ್ಣವಾಗಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಇದಕ್ಕಾಗಿ ನಾವು ನಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ್ದೇವಾ ಅಥವಾ ನಮ್ಮ ಬೇಡಿಕೆಗಳ ಹೋರಾಟದ ದನಿ ಕ್ಷೀಣಿಸಿದೆಯಾ ಎಂಬುದನ್ನು ಕುರಿತು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಹಣದಿಂದ ಚುನಾವಣೆಗಳನ್ನು ಗೆಲ್ಲುವವರಿಂದ ನಾವು ಜನಪರ ನಿಲುವು ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದಾಗಿ ಮತದಾರರು ಯೋಗ್ಯರಿಗೆ ಮತ ಚಲಾಯಿಸಬೇಕು. ಅಲ್ಲದೇ, ಮೇಲು ಕೀಳೆಂಬ ಅನಿಷ್ಠ ಪದ್ದತಿಗಳು ದೇಶಾದ್ಯಂತ ಇನ್ನೂ ಚಾಲ್ತಿಯಲ್ಲಿವೆ. ನಮ್ಮ ಸರ್ಕಾರಗಳೂ ಕೂಡ ಜಾತಿ ಸಂಘಟನೆಗಳಿಗೆ ಹೆಚ್ಚು ಪೆÇ್ರೀತ್ಸಾಹವನ್ನು ನೀಡುತ್ತಿವೆ. ಪ್ರಸ್ತುತ ಸನ್ನಿವೇಶದಲ್ಲಿ ಜಾತಿಯನ್ನು ಸಡಿಲಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದಾಗ ಕೆಲವು ಕೆಲವೇ ಮೇಲ್ವರ್ಗದ ಜನರ ಕೈಯಲ್ಲಿ ದೇಶದ ಸಂಪತ್ತು ಕ್ರೂಢೀಕರಣವಾಗಿದೆ. ಜಾತಿ ಪದ್ದರಿ ದೂರವಾಗುವ ತನಕ ಆರ್ಥಿಕ ಸಂಪತ್ತು ಸಮಾನವಾಗಿ ಹಂಚಿಕೆಯಾಗಲು ಅಸಾಧ್ಯ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ದೇಶದಲ್ಲಿ ಬಡತನ ಹೆಚ್ಚಾಗಿದೆ. ಇಂದಿಗೂ ಬಡ ಜನರು ಅಕ್ಕಿಗಾಗಿ ರೇಷನ್ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ನಮ್ಮ ನಾಯಕರು ಜನರಿಗೆ ಹೊಟ್ಟೆ ತುಂಬಾ ಊಟವನ್ನೇ ನೀಡಲು ಸಾಧ್ಯವಾಗಿಲ್ಲ. ಅಷ್ಟೋಂದು ಬಡಜನರನ್ನು ದೇಶಾದ್ಯಂತ ಉಳಿಸಿಕೊಂಡಿದ್ದೇವೆ. ಇದರಿಂದಾಗಿ ಅವರ ದನಿ ಕ್ಷೀಣವಾಗಿದೆ. ಅಂತಹವರಿಂದ ಎಂತಹ ಹೋರಾಟ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ ಅವರು, ಒಡಲು ಟ್ರಸ್ಟ್ ಜನರ ದನಿಯಾಗಿ ಕೆಲಸ ಮಾಡುವ ನಂಬಿಕೆ ಇದೆ ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮೀಸಲಾತಿ ಸವಾಲುಗಳು ಮತ್ತು ಸಾಧ್ಯತೆಗಳು ವಿಷಯ ಕುರಿತು ಪ್ರಾಧ್ಯಾಪಕರಾದ ಡಾ.ಕವಿತಾ ರೈ ಹಾಗೂ ಜಾತಿ ಗಣತಿ ಅನಿವಾರ್ಯತೆ ಮತ್ತು ಸಾಮಾಜಿ ನ್ಯಾಯ ವಿಷಯ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎಸ್.ಲಿಂಗಪ್ಪ ಮಾತನಾಡಿದರು. ಒಡಲು ಟ್ರಸ್ಟ್ ಅಧ್ಯಕ್ಷ ಆರ್.ಎಸ್.ದೊಡ್ಡಣ್ಣ, ಕಾರ್ಯದರ್ಶಿ ಕೆ.ಎಂ.ಶಿವಲಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು.