ಕಾರ್ ಪಲ್ಟಿ: ಇಬ್ಬರು ಮೃತ್ಯು

ಕಾರವಾರದ ಲಂಡನ್ ಬ್ರಿಡ್ಜ್ ಬಳಿ ಬೆಳಗ್ಗೆ ನಡೆದ ಅವಘಡ: ಮತ್ತಿಬ್ಬರಿಗೆ ಗಾಯ
ಕಾರವಾರ, ನ.೩- ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ಇಂದು (ಮಂಗಳವಾರ) ಬೆಳಗ್ಗೆ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಮೂಲದ ಕಿರಣ್(೨೮) ಹಾಗೂ ರಾಕೇಶ್ ಸಿ.ಆರ್.(೨೮) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇವರು ಕಾರಿನಲ್ಲಿ ಅಂಕೋಲಾ ಕಡೆಯಿಂದ ಗೋವಾದತ್ತ ತೆರಳುತ್ತಿದ್ದರೆನ್ನಲಾಗಿದೆ. ಈ ವೇಳೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಮರಿಗೆ ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಕಾರವಾರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.