ಕಾರ್ ಡಿಕ್ಕಿ: ನಿವೃತ್ತ ಸರ್ಕಾರಿ ಅಧಿಕಾರಿ ಮೃತ್ಯು

ತಡರಾತ್ರಿ ನಡೆದ ಘಟನೆ: ಆರೋಪಿ ಪೊಲೀಸ್ ವಶ
ಮಂಗಳೂರು, ಮಾ.೨೯- ನಗರದ ಸರ್ಕ್ಯೂಟ್ ಹೌಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಸರಕಾರಿ ಅಧಿಕಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಮೃತರನ್ನು ನಗರದ ಲೇಡಿಹಿಲ್ ನಿವಾಸಿ ಎ. ಆನಂದ (೬೨) ಎಂದು ಗುರುತಿಸಲಾಗಿದೆ. ಬಿಎಸ್‌ಎನ್‌ಎಲ್ ಅಧಿಕಾರಿಯಾಗಿದ್ದ ಆನಂದ ಅವರು ನಿವೃತ್ತಿ ಬಳಿಕ ಉಡುಪಿಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ನಿನ್ನೆ ರಾತ್ರಿ ಕಂಪೆನಿಗೆ ಸಂಬಂಧಿಸಿದ ಮೀಟಿಂಗ್ ಮುಗಿಸಿ, ಬಸ್ಸಿನಿಂದಿಳಿದು ಸರ್ಕ್ಯೂಟ್ ಹೌಸ್ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ಅವರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಮಂಗಳೂರು ಉಪ ವಿಭಾಗದ ಎಇಇ ಆಗಿದ್ದ ಷಣ್ಮುಗಂ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ತನ್ನ ಕಾರು ಚಲಾಯಿಸಿ ಆನಂದ್ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡ ಆನಂದ ಸ್ಥಳದಲ್ಲೇ ಮೃತಪಟ್ಟರೆ, ಆರೋಪಿ ಕಾರು ಚಾಲಕ, ಸರಕಾರಿ ಅಧಿಕಾರಿ ಷಣ್ಮುಗಂ ಕಾರು ನಿಲ್ಲಿಸದೆ ಪರಾರಿಯಾದ ಎನ್ನಲಾಗಿದೆ.

ತಕ್ಷಣ ಸ್ಥಳೀಯರು ಇತರ ವಾಹನದಲ್ಲಿ ಬೆನ್ನಟ್ಟಿ ಕಾರನ್ನು ತಡೆಹಿಡಿದರು. ಅಲ್ಲದೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದರು. ಮೃತ ಆನಂದ ಅವರ ಪತ್ನಿ ನೀಡಿದ ದೂರಿನಂತೆ ಆರೋಪಿ ಷಣ್ಮುಗಂ ವಿರುದ್ಧ ಕದ್ರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.