ಕಾರ್‌ಗೆ ಲಾರಿ ಡಿಕ್ಕಿ: ನವವಿವಾಹಿತೆ ಮೃತ್ಯು

ಪುತ್ತೂರು, ಎ.೪- ಕೋಳಿ ಸಾಗಾಟದ ಲಾರಿ ಮತ್ತು ವ್ಯಾಗನರ್ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಪುತ್ತೂರಿನ ನವ ವಿವಾಹಿತೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಬೆಂಗಳೂರಿನ ನೆಲಮಂಗಲದ ಬಳಿ ನಡೆದಿದೆ.

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ (23) ಮೃತರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೊಪೀಕ್ ಹಾಗೂ ಧನುಷಾ ಅವರ ವಿವಾಹ  ಫೆ. 21ರಂದು ನಡೆದಿತ್ತು. ನವ ದಂಪತಿ ತಮ್ಮ ಸಂಬಂಧಿಕರಾದ ಶುಭಲಕ್ಷ್ಮೀ ಮತ್ತು ರೂಪಾ ವೇಣುಗೋಪಾಲ್ ಎಂಬವರ ಜತೆ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಶನಿವಾರ ಮುಂಜಾನೆ ವ್ಯಾಗನರ್ ಕಾರಿನಲ್ಲಿ ಹೊರಟಿದ್ದರು. ಕಾರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಸಮೀಪಿಸುತ್ತಿದ್ದಂತೆ ಕೋಳಿ ಸಾಗಾಟದ ಲಾರಿ ಢಿಕ್ಕಿಯಾಗಿದೆ. ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಧನುಷಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗೊಪೀಕ್, ರೂಪ ವೇಣುಗೋಪಾಲ್ ಹಾಗೂ ಶುಭ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದು ಅವರನ್ಬು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.