ಕಾರ್‌ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ: ಓರ್ವ ಮೃತ್ಯು

ಬಂಟ್ವಾಳ, ಮಾ.೩೧- ಮೆಲ್ಕಾರ್ ಸಮೀಪದ ಪಾಣೆಮಂಗಳೂರಿನಲ್ಲಿ ಮಾರುತಿ ಇಕೋ ಕಾರಿಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ನಿನ್ನೆ ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದ ಇಬ್ಬರ ಪೈಕಿ ಒಬ್ಬರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಮೂಲ್ಕಿ ಸಮೀಪ ಕಿನ್ನಿಗೋಳಿಯ ಐಕಳ ನಿವಾಸಿ ಗೋಪಾಲ (೪೧) ಎಂದು ಗುರುತಿಸಲಾಗಿದೆ. ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಲ್ಕಿ ಕಿನ್ನಿಗೋಳಿ ಐಕಳ ನಿವಾಸಿಗಳು ಸುಳ್ಯ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆಗೆ ಡೋಲು ಬಾರಿಸುವ ಸೇವೆ ಸಲ್ಲಿಸಿ ಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲ್ಕಿ ಸಮೀಪದ ಕಿನ್ನಿಗೋಳಿ ಐಕಳ ನಿವಾಸಿಗಳಾದ ರಘುನಾಥ, ಗೋಪಾಲ, ಶೇಖರ, ಮುದರ, ರಾಜೇಶ್, ಸಂದೀಪ ಎಂಬವರು ಗಾಯಗೊಂಡಿದ್ದರು. ಈ ಪೈಕಿ ರಘುನಾಥ ಹಾಗೂ ಗೋಪಾಲ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಗೋಪಾಲ ಅವರು ಮೃತಪಟ್ಟಿದ್ದಾರೆ. ಅಪಘಾತದಿಂದ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಟ್ರಾಫಿಕ್ ಎಸ್ಸೈ ರಾಜೇಶ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.