ಕಾರ್ಯ ವರದಿ ಬಿಡುಗಡೆ

ಬೆಂಗಳೂರು,ಸೆ.೨- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ೨೦೨೩ರ ಆಗಸ್ಟ್ ತಿಂಗಳಲ್ಲಿ ೧೩೪ ಸಭೆ, ಸಮಾರಂಭ, ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ.
ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದ ತಮ್ಮ ಮೂರನೆಯ ತಿಂಗಳ ಕಾರ್ಯ ವರದಿ ಬಿಡುಗಡೆ ಮಾಡಿರುವ ಸಚಿವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವಾಲಯದ ಕಚೇರಿಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರಗೊಳಿಸಲು ಕ್ಯೂ.ಆರ್ ಕೋಡ್ ಆಧಾರಿತ ಕಲಬುರಗಿ ಕನೆಕ್ಟ್ ಸೇರಿದಂತೆ ಹಲವಾರು ಮಹತ್ವಯುತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರೊಂದಿಗೆ ೧೩ ಸಭೆಗಳಲ್ಲಿ ಪಾಲ್ಗೊಂಡಿದ್ದ ಸಚಿವರು ಸ್ಥಳೀಯ ಮತ್ತು ವಿದೇಶಿ ಗಣ್ಯರು ಹಾಗೂ ನಿಯೋಗಗಳೊಂದಿಗೆ ೩೩ ಸಭೆಗಳನ್ನು ನಡೆಸಿದ್ದು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ೧೬ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ೧೬ ಸೇರಿದಂತೆ ಒಟ್ಟು ೩೩ ಸಭೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ನಡೆಸಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾಡಳಿತಕ್ಕೆ ಸಂಬಂಧಪಟ್ಟಂತೆ ೨೩ ಸಭೆಗಳಲ್ಲಿ ಪಾಲ್ಗೊಂಡ ಸಚಿವರು ಜಿಲ್ಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ.