ಕಾರ್ಯಾನು ಧಾನ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯ

ಮಂಡ್ಯ:ಏ:18: ನೀರು ಬಳಕೆದಾರರ ಸಹಕಾರ ಸಂಘಗಳಿಗೆ ವಾರ್ಷಿಕ ನೀಡುವ ಕಾರ್ಯಾನು ಧಾನವನ್ನು 1 ಲಕ್ಷದಿಂದ 3 ಲಕ್ಷ ರೂ.ಗಳವರೆಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಎನ್. ಶಿವಲಿಂಗಯ್ಯ ತಿಳಿಸಿದರು.
ತಾಲೂಕಿನ ಮಂಗಲ ಗ್ರಾಮದಲ್ಲಿ ಅಚ್ಚುಕಟ್ಟು ಪ್ರಾಧಿಕಾರ, ಮಂಗಲ ನೀರು ಬಳಕೆದಾರರ ಸಹಕಾರ ಸಂಘದಿಂದ ಮಂಗಲ ಗ್ರಾಮದಲ್ಲಿ ನಡೆದ ಬ್ಯಾಟರಿ ಚಾಲಿತ ಔಷಧಿ ಸಿಂಪಡಿಸುವ ಸಲಕರಣೆ (ಪಂಪ್) ವಿತರಿಸಿ ಮಾತನಾಡಿದರು.
ಸಂಘಗಳು ಸ್ವಾಯತ್ತವಾಗಿ ಕೆಲಸ ನಿರ್ವಹಿಸು ವಂತಾಗಲು ವಿತರಣಾ ನಾಲೆ, ಶಾಖಾ ನಾಲೆಗಳ ನಿರ್ವಹಣೆಗೆ ಅನುಗುಣವಾಗಿ 1 ಲಕ್ಷ ವಾರ್ಷಿಕ ಕಾರ್ಯಾನುಧಾನದ ಬದಲಾಗಿ 3 ಲಕ್ಷ ನೀಡಿದರೆ, ಕಡೇ ಭಾಗದ ರೈತನಿಗೆ ಸಮರ್ಪಕವಾಗಿ ನೀರು ತಲುಪಿಸಲು ಅನುಕೂಲವಾಗುತ್ತದೆ ಎಂದರು.
ಮಂಗಲ ಆಯಕಟ್ಟು ರಸ್ತೆಗಳಲ್ಲಿ ಪ್ರಮುಖವಾಗಿ ಎರಡು ರಸ್ತೆಗಳನ್ನು ಜನ-ಜಾನುವಾರುಗಳ ಅನುಕೂಲಕ್ಕಾಗಿ ದುರಸ್ಥಿ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಪೂರಕವಾಗಿ ಎಸ್‍ಇಪಿ ಮತ್ತು ಟಿಎಸ್‍ಪಿ ಸಂಘದ Àಲಾನುಭವಿಗಳಿಗೆ ಉಚಿತ ಸದಸ್ಯತ್ವ ನೀಡಿ ಆ ಮೂಲಕ ಶೇ. 100ರಷ್ಟು ಉಚಿತವಾದ ಯಂತ್ರೋಪಕರಣ ನೀಡಲು ಕೃಷಿ ಸಾಧನ ಸಲಕರಣೆಗಳನ್ನು ನೀಡಲು ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಸಂಘದ ಬಲವರ್ಧನೆ ಸದಸ್ಯರ ಇಚ್ಚಾಶಕ್ತಿಗೆ ಅನುಗುಣವಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಕಾವೇರಿ ಜಲಾನಯನ ವ್ಯಾಪ್ತಿಯ ಪ್ರದೇಶಗಳಲ್ಲಿ ಸಂಘಗಳು ನಿಷ್ಕ್ರಿಯ ಮನೋಭಾವವನ್ನು ತಾಳಿದೆ. ಈ ಬಗ್ಗೆ ಅಚ್ಚುಕಟ್ಟುದಾರರು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ಎಸ್. ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾ ಮಂಡಲದ ಉಪಾಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ಸಂಘಗಳ ಪುನಶ್ಚೇತನಕ್ಕೆ ಹಲವಾರು ಯೋಜನೆಗಳನ್ನು ಸಹಕಾರ ಬ್ಯಾಂಕ್ ಮತ್ತು ಕಾಡಾ ನಿರ್ವಹಿಸುತ್ತಿದೆ. ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ಸಂಘಗಳ ಪುನಶ್ಚೇತನ ತೀರಾ ಅವಶ್ಯಕವಾಗಿದೆ. ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ 252 ಸಹಕಾರ ಸಂಘಗಳು ನೋಂದಣಿಗೊಂಡಿದ್ದು, ಅವು ಕಾರ್ಯೋನ್ಮುಖರಾಗಬೇಕಾದರೆ ಚುನಾಯಿತ ಪ್ರತಿನಿಧಿಗಳು ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಪಾತ್ರ ಮುಖ್ಯವಾಗಿರುತ್ತದೆ. ಆದ್ದರಿಂದ ನಮ್ಮ ಚುನಾಯಿತ ಸಹಕಾರ ಸಂಘದ ಪ್ರತಿನಿಧಿಗಳು ನೀರು ಬಳಕೆದಾರರ ಸಹಕಾರ ಸಂಘಗಳ ಸಭೆ ಮತ್ತು ಆಡಿಟ್ ವರದಿಗಳು ಸಾಮಾನ್ಯ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾಡಾದ ಭೂ ಅಭಿವೃದ್ಧಿ ಅಧಿಕಾರಿ ಮಧುಸೂದನ್ ಮಾತನಾಡಿದರು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕ ಎಚ್.ಕೆ. ಅಶೋಕ್, ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಂ.ಬಿ. ಸುರೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಯೋಗಾನಂದ, ಇಂಜಿನಿಯರ್‍ಗಳಾದ ಸಾಗರ್, ಜಿ.ಎನ್. ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.
ನೀರು ಬಳಕೆದಾರರ ಸಂಘದ 30 ಮಂದಿ ರೈತ ಸದಸ್ಯರುಗಳಿಗೆ ಔಷಧಿ ಪಂಪ್‍ಗಳನ್ನು ವಿತರಿಸಲಾಯಿತು.