ಕಾರ್ಯಮರೆತವರು ಕಾನಿಪ ಸಂಘಕ್ಕೆ ಬೇಕಾಗಿಲ್ಲಃ ಶಿವಾನಂದ ತಗಡೂರ

ವಿಜಯಪುರ, ಆ.2-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯಮರೆತವರು ಬೇಕಾಗಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಇಲ್ಲಿ ಪುನರುಚ್ಛಸಿದರು.
ನಗರದ ಪತ್ರಿಕಾ ಭವನದಲ್ಲಿ ರವಿವಾರ ಸಂಜೆ ನಡೆದ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಸರೇ ಸೂಚಿಸುವಂತೆ ಈ ಸಂಘದಲ್ಲಿ ಕಾರ್ಯನಿರತರಿಗಷ್ಟೇ ಅವಕಾಶವಿದೆ. ಕಾರ್ಯಮರೆತವರು ನಮಗೆ ಬೇಕಾಗಿಲ್ಲ. ಅಂಥವರ ಅವಶ್ಯಕತೆಯೂ ನಮಗಿಲ್ಲ ಎಂದು ಖಂಡತುಂಡವಾಗಿ ಹೇಳಿದರು.
ಕಾರ್ಯನಿರತ ಯಾವ ಪತ್ರಕರ್ತರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಂಘದ ಸದಸ್ಯತ್ವ ಕಾರ್ಡ ಬಯಸುವವರು ತಾವು ನಿಜವಾಗಿಯೂ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆಯೇ ಎಂಬುದನ್ನು ತಮ್ಮಷ್ಟಕ್ಕೆ ತಾವೇ ಆತ್ಮವಿಮರ್ಷೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸರಕಾರ ರೇಷನ್ ಕಾರ್ಡ ವಿತರಿಸಿದಂತೆ ಎಲ್ಲರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡೋಕಾಗಲ್ಲ. ಕ್ರಿಯಾಶೀಲವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕಾರ್ಡ ನೀಡಲಾಗುತ್ತದೆ ಎಂದರು.
ಪತ್ರಿಕಾ ದಿಗ್ಗಜರಾದ ಡಿವಿಜಿ ಹುಟ್ಟು ಹಾಕಿದ ಹಾಗೂ ಎಚ್.ಎಸ್.ದೊರೆಸ್ವಾಮಿ, ಜಯಶೀಲರಾವ್ ಅವರಂಥ ಅನೇಕ ಮಹನೀಯರು ಮುನ್ನಡೆಸಿಕೊಂಡು ಬಂದ ಸಂಘಟನೆ ಕೆಯುಡಬ್ಲ್ಯುಜೆ. ಇದು ಇಂದು ನಿನ್ನೆ ಹುಟ್ಟಿಕೊಂಡಂಥ ಸಂಘಟನೆಯಲ್ಲ. ಈ ಸಂಘಟನೆಗೆ ತನ್ನದೇಯಾದ ಒಂದು ಒಳ್ಳೆಯ ಹಿನ್ನೆಲೆ ಹಾಗೂ ಇತಿಹಾಸವಿದೆ. ಸದಸ್ಯರು ಕೆಯುಡಬ್ಲ್ಯೂಜೆ ಸದಸ್ಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂಥ ಒಂದು ಬಲಿಷ್ಠ ಹಾಗೂ ಕ್ರಿಯಾಶೀಲ ಪತ್ರಕರ್ತರ ಸಂಘಟನೆ ಇದಾಗಿದ್ದು, ಸಂಘದ ಕಾರ್ಡ ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಗಳಿಸಲು, ಮತ್ತಿನ್ನಾವುದೋ ದಂಧೆ ನಡೆಸಲು ಯಾವತ್ತು ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಬದ್ಧತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಈ ಸಂಘದಲ್ಲಿ ಅವಕಾಶವಿದೆಯೇ ವಿನ: ಕಾರ್ಯಮರೆತವರಿಗಲ್ಲ. ಐಡಿ ಕಾರ್ಡಗಾಗಿ ಝೆರಾಕ್ಸ್ ಪೇಪರ ಪ್ರಿಂಟ್ ಮಾಡುವುದನ್ನು ನಾವು ನೋಡಿದ್ದೇವೆ. ಪತ್ರಕರ್ತರೆಂದು ಹೇಳಿಕೊಳ್ಳುವ ಇಂಥವರಿಗೆ ಯಾವ ಕಾರಣಕ್ಕೂ ಸಂಘದ ಸದಸ್ಯತ್ವ ನೀಡಬಾರದು ಎಂದು ಸಂಘದ ಪದಾಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಹಲವಾರು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.