ಕಾರ್ಯನಿರ್ವಾಹಕ ಅಭಿಯಂತರ ವರ್ಗಾವಣೆಗೆ ಒತ್ತಾಯ

ರಾಯಚೂರು,ಆ.೨- ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸಪ್ಪ ಮೆಕಾಲೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಜೆಡಿಎಸ್ ದೇವದುರ್ಗ ತಾಲೂಕಾಧ್ಯಕ್ಷ ಹಾಗೂ ಗುತ್ತೇದಾರ ಬುಡ್ಡನಗೌಡ ಪಾಟೀಲ್ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಗಳನ್ನು ಎತ್ತುವಳಿ ಮಾಡುವ ಮೂಲಕ ಸರಕಾರದ ಖಜಾನೆಗೆ ನಷ್ಟವನ್ನು ಮಾಡಿದ್ದಲ್ಲದೆ ಒಂದೇ ರಸ್ತೆ ಕಾಮಗಾರಿಗೆ ಎರಡೆರಡು ಹೆಸರುಗಳಲ್ಲಿ ಹಣ ಎತ್ತುವಳಿ ಮಾಡಿ ರಂಜಿತ್ ಕನ್ಸಟ್ರಕ್ಷನ್ ಅವರ ಖಾತೆ ಹಣ ಜಮಾ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ಮಾಹಿತಿಗಳನ್ನು ಜಾಲಾಡಿಸಿದಾಗ ಕಾಮಗಾರಿಗಳನ್ನು ಮಾಡದೇ ಬಿಲ್ ಗಳನ್ನು ನುಂಗಿರುವ ವಿಷಯಗಳು ಬಯಲಿಗೆ ಬಂದಿದೆ. ಈಗಾಗಲೇ ಬಿಲ್ ಪಾವತಿ ಮಾಡಿರುವ ಕಾಮಗಾರಿಗಳಿಗೆ ಈಗ ಚಾಲನೆ ಕೊಡಲಾಗುತ್ತಿದೆ. ಹೀಗೆ ಹಲವು ಗೊಂದಲಗಳಿಗೆ ಕಾರಣವಾಗಿರುವ ಚನ್ನಬಸಪ್ಪ ಮೆಕಾಲೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದೆ ಹೋದರೆ ಹಂತಹಂತವಾಗಿ ಹೋರಾಟದ ಮಾರ್ಗಗಳನ್ನು ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನಸಭಾ ಚುನಾವಣೆಗೂ ಮುನ್ನ ಲೋಕೋಪಯೋಗಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಪಕ್ಷವೂ ವ್ಯಾಪಕ ಹಾಗೂ ಉಗ್ರ ಹೋರಾಟಗಳನ್ನು ಮಾಡಿ ಈ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಸಾಕಷ್ಟು ಮಾಡಲಾಗಿತ್ತು.ಈಗ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಶಾಸಕಿಯಾಗಿ ಆಯ್ಕೆಯಾದ ನಂತರವೂ ಚನ್ನಬಸಪ್ಪ ಮೆಕಾಲೆ ಅವರನ್ನು ವರ್ಗಾವಣೆ ಮಾಡುವಂತೆ ಸರಕಾರದ ಮೇಲೆ ಒತ್ತಡ ಹಾಕಿದ್ದರೂ ಕಾರ್ಯನಿರ್ವಾಹಕ ಅಭಿಯಂತರರಾಗಿ ಚನ್ನಬಸಪ್ಪ ಮೆಕಾಲೆ ಮುಂದುವರೆದಿದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.