ಕಾರ್ಯಕ್ಷಮತೆ ಮಾನದಂಡ:ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜೂ.೧೧:ತೆರಿಗೆ ಸಂಗ್ರಹದಲ್ಲಿ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಯಾವುದೇ ಪ್ರಭಾವಕ್ಕೂ ಮಣೆ ಹಾಕುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವಾಣಿಜ್ಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಮೇಲ್ಮನವಿ ಪ್ರಕರಣಗಳನ್ನು ೩ ತಿಂಗಳೊಳಗೆ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದರೆ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಅವರು ತಾಕೀತು ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತೆರಿಗೆ ಸಂಗ್ರಹದಲ್ಲಿ ಗುರಿ ಸಾಧಿಸದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ. ವರ್ಗಾವಣೆ ವೇಳೆ ನಿಮ್ಮ ಕಾರ್ಯಕ್ಷಮತೆ ಮಾನದಂಡವಾಗಲಿದೆ ಎಂದು ಹೇಳಿದರು.
ವೃತ್ತಿ ತೆರಿಗೆ ಸಂಗ್ರಹವನ್ನು ಚುರುಕುಗೊಳಿಸಲು ಹಾಗೂ ಗುರಿ ನಿಗದಿಪಡಿಸಲು ಸೂಚನೆ ನೀಡಿರುವ ಸಿದ್ದರಾಮಯ್ಯ, ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ, ತಿಂಗಳಿಗೆ ೨ ಬಾರಿ ಕಡ್ಡಾಯವಾಗಿ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಮೇಲ್ಮನವಿಗಳನ್ನು ಸಕಾಲದಲ್ಲಿ ಇತ್ಯರ್ಥ ಪಡಿಸಬೇಕು. ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಆ ವೇಳೆಗೆ ಗುರಿ ತಲುಪಿರಬೇಕು ಎಂದು ಹೇಳಿದರು.
ಸಭೆಯಲ್ಲಿ ಸಚಿವ ಆರ್.ಬಿ ತಿಮ್ಮಾಪುರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್ ಸೇರಿದಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.