ಕಾರ್ಯಕರ್ತರ ಸಮಸ್ಯೆ ಪರಿಹಾರಕ್ಕೆ ಆಗ್ರಹ

ರಾಮನಗರ.ಫೆ೨೦:ನಾಲ್ಕೈದು ದಿನಗಳಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಸ್ಯೆ ಸರಿಪಡಿಸದಿದ್ದರೆ ಬೆಂಗಳೂರಿನ ಕಚೇರಿಗೆ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸುವುದಾಗಿ ಬಿಡದಿ ಗ್ರೇಟರ್ ಸಿಟಿ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ ಬಾಬು ತಿಳಿಸಿದರು.
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಂಚಮುಖಿ ಆಂಜನೇಯ ದೇವಾಲಯದ ಎದುರು ಕಪ್ಪು ಪಟ್ಟಿ ಧರಿಸಿ ಕಾರ್ಯಕರ್ತರೊಂದಿಗೆ ಭಾನುವಾರ ಪ್ರತಿಭಟಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಕಾರ್ಯಕರ್ತರ ಜತೆ ಚರ್ಚಿಸಿಲ್ಲ. ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಸಮಿತಿ ವಿಚಾರವಾಗಿಯೂ ಸ್ಥಳೀಯ ನಾಯಕರನ್ನು ಮರೆತಿದ್ದಾರೆ. ಕೂಡಲೇ ಸ್ಥಳೀಯವಾಗಿ ಉದ್ಭವಿಸಿರುವ ಕಾರ್ಯಕರ್ತರ ಸಮಸ್ಯೆ ಪರಿಹರಿಸಬೇಕಿದೆ ಎಂದರು.
ರಾಮನಗರ ಪ್ರಾಧಿಕಾರ ಸದಸ್ಯ ನರೇಂದ್ರ ಮಾತನಾಡಿ, ಇತ್ತೀಚೆಗಷ್ಟೆ ಬಿಜೆಪಿ ಸೇರಿರುವ ಗೌತಮ್ ಗೌಡ ಅವರು ಏಕಪಕ್ಷೀಯ ತೀರ್ಮಾನ ಕೈಗೊಳ್ಳುವ ಮೂಲಕ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದು ಬೇಸರ ತರಿಸಿದೆ. ಗೌತಮ್ ಗೌಡ ಅವರನ್ನು ರಾಮಮಂದಿರ ಸಮಿತಿ ಸದಸ್ಯರನ್ನಾಗಿ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ ವರದರಾಜುಗೌಡ, ಅವರು ಬೆಂಗಳೂರಿನ ಜೆ.ಪಿ.ನಗರ ವಾಸಿ, ಅವರಿಗೂ ರಾಮನಗರಕ್ಕೂ ಸಂಬಂಧ ಇಲ್ಲ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಆಗಬೇಕಿದೆ ಎಂದರು. ರಾಮನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುರಳೀಧರ್, ಹರೀಸಂದ್ರ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಸದಸ್ಯ ಪ್ರವೀಣ್‌ಗೌಡ, ಎಸ್‌ಸಿ ಮೋರ್ಚಾ ರಾಜ್ಯ ಕಮಿಟಿ ಸದಸ್ಯ ರಾಮಸಾಗರ ಕೃಷ್ಣ, ಮುಖಂಡರಾದ ಗೋವಿಂದರಾಜು, ಮಂಜು, ರಾಮಾಂಜನೇಯ, ಮರಳವಾಡಿ ಚಂದ್ರು, ರಾಜೇಶ್, ನಾಗೇಶ್, ಕೃಷ್ಣ, ಯೋಗೇಂದ್ರಸ್ವಾಮಿ, ಲೋಕೇಶ್, ಪ್ರಭು, ಧರ್ಮ, ವಿನೋದ್, ಕಿರಣ್, ಪ್ರಕಾಶ್ ಇದ್ದರು.