ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ 15 ಸಾವಿರ ಜನ ಭಾಗಿ

ಅಫಜಲಪುರ:ಮಾ.13: ಮಾರ್ಚ್ 16 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲು ಕಲಬುರ್ಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಾಲೂಕಾ ಬಿಜೆಪಿ ನೂತನ ಅಧ್ಯಕ್ಷ ವಿದ್ಯಾಧರ ಮಂಗಳೂರೆ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಂದಿನ ದಿನ ಕಲಬುರ್ಗಿ ನಗರದ ನೂತನ ವಿದ್ಯಾಲಯ(ಎನ್.ವಿ) ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಲೋಕಸಭಾ ಚುನಾವಣೆ ಹಿನ್ನೆಲೆ ಕಲಬುರ್ಗಿ ನಗರ, ಗ್ರಾಮೀಣ ಹಾಗೂ ಬೀದರ್ ಜಿಲ್ಲೆಯ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದಾರೆ. ಹೀಗಾಗಿ ಅಂದಿನ ದಿನ ಅಫಜಲಪುರ ಮತಕ್ಷೇತ್ರದಿಂದ ಸುಮಾರು 15 ಸಾವಿರ ಜನ ಭಾಗಿಯಾಗಲಿದ್ದು, ಈಗಾಗಲೇ ಬೂತ್ ಮಟ್ಟದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಿಕಟ ಪೂರ್ವ ನಗರ ಅಧ್ಯಕ್ಷ ಹಾಗೂ ಲೋಕಸಭಾ ಚುನಾವಣೆ ಪ್ರಭಾರಿ ಸಿದ್ದಾಜಿ ಪಾಟೀಲ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ನಂತರ ಧೂಳಿಪಟ ಆಗಲಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಸರ್ಕಾರದ ಬಳಿ ಹಣ ಇಲ್ಲ ಹೀಗಾಗಿ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಯಾವುದೇ ಆಸೆ ಆಮಿಷಗಳಿಗೆ ಪ್ರಜ್ಞಾವಂತ ಮತದಾರರು ಬಲಿಯಾಗದೆ ಈ ದೇಶದ ಹಾಗೂ ಈ ನಾಡಿನ ಸವಾರ್ಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರನ್ನು “ಅಬ್ ಕಿ ಬಾರ್ 400 ಪರ್” ಎಂಬ ಘೋಷವಾಕ್ಯದೊಂದಿಗೆ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಗೆಲ್ಲಿಸೋಣ ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆ ತಾಲೂಕು ಸಂಚಾಲಕ ಬೀರಣ್ಣ ಕಲ್ಲೂರ ಅವರು ಮಾತನಾಡಿ, ಮಾರ್ಚ್. 12 ರಂದು ಕಲಬುರಗಿ ರೈಲು ನಿಲ್ದಾಣದಲ್ಲಿ ವರ್ಚುವಲ್ ಮೂಲಕ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದಾರೆ. ಭಾರತ್ ಮಾಲಾ ಯೋಜನೆ ಅಡಿ ಸೂರತ್- ಚೆನ್ನೈವರೆಗಿನ ಗ್ರೀನ್ ಫೀಲ್ಡ್ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದೆ. ಇಂತಹ ಉನ್ನತಮಟ್ಟದ ಯೋಜನೆಗಳಿಂದ ಪ್ರಗತಿಯ ಜೊತೆಗೆ ಸಂಪರ್ಕ ಕ್ರಾಂತಿ ಉಂಟಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇಂತಹ ಯೋಜನೆಗಳನ್ನು ದೇಶದ ಜನರಿಗೆ ಹಸ್ತಾಂತರಿಸುತ್ತಿರುವ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ಸಿಗರ ಯಾವುದೇ ಆಮೀಷಗಳಿಗೆ ಬಲಿಯಾಗದೆ ಈ ಬಾರಿ ತಕ್ಕ ಪಾಠ ಕಲಿಸೋಣ. ಈಗಾಗಲೇ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಸ್ವಾಗತ ಕೋರಲು ಕಲಬುರ್ಗಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಅಂದಿನ ಸಮಾವೇಶದಲ್ಲಿ ಸರಿಸುಮಾರು 3 ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಚಂದಮ್ಮ ಪಾಟೀಲ್
ನಿಕಟ ಪೂರ್ವ ಅಧ್ಯಕ್ಷ ಶೈಲೇಶ್ ಗುಣಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಧುತ್ತರಗಾಂವ, ಶರಣು ಪದಕಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಭೀಮರಾವ ಕಲಶೆಟ್ಟಿ, ಯುವ ಮುಖಂಡ ಸಚಿನ್ ಮ್ಯಾಕೇರಿ ಉಪಸ್ಥಿತರಿದ್ದರು.