ಕೋಲಾರ, ಮಾ.೨೮- ಕಾಂಗ್ರೆಸ್ ಪಕ್ಷದಿಂದ ಯಾರನ್ನು ಗೆಲ್ಲಿಸಿದ್ದೀವಿ ಅವರು ನಮ್ಮ ವಿರುದ್ದ ಇದ್ದಾರೆ, ಯಾರನ್ನು ಸೋಲಿಸಿದ್ದೀವಿ ಅವರಿಂದು ಕಾಂಗ್ರೆಸ್ ಜೊತೆಗೆ ಇದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಯಾರು ಸಹ ಅನಿವಾರ್ಯವಲ್ಲ, ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಶಕ್ತಿ ಯಾರೇ ಕಾಂಗ್ರೆಸ್ ಬಿಟ್ಟು ಹೋದರು ಸರಿ ಅಸ್ತಿತ್ವ ಉಳಿಸಿಕೊಂಡು ಸವಾಲುಗಳನ್ನು ಎದುರಿಸಿ ಜನರ ಮುಂದೆ ಕಾಂಗ್ರೆಸ್ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.
ತಾಲೂಕಿನ ಅಜ್ಜಪ್ಪನಹಳ್ಳಿ ಗೇಟ್‌ನಲ್ಲಿ ಭಾನುವಾರ ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುತ್ತೂರು ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತ್ತೂರು ಹೋಬಳಿಯಲ್ಲಿ ಸಾಮಾನ್ಯ ರೈತ ಕುಟುಂಬದಿಂದ ಬಂದಂತಹ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಜಿಪಂ ಸದಸ್ಯನಾಗಿ, ಉಪಾಧ್ಯಕ್ಷನಾಗಿ, ಯೋಜನಾ ಮಂಡಳಿ ನಿರ್ದೇಶಕ, ಕೋಚಿಮುಲ್ ನಿರ್ದೇಶಕ ಸ್ಥಾನ ನೀಡಿ ಅಧಿಕಾರ ಅನುಭವಿಸಿ ಇವತ್ತು ಕಾಂಗ್ರೆಸ್ ಪಕ್ಷದ ವಿರುದ್ದ ಸವಾಲು ಹಾಕುತ್ತಾರೆ ಎಂದರೆ ಅದು ಅವರ ಮೂರ್ಖತನ ಕಾಂಗ್ರೆಸ್ ಜನರಿಂದ ಕಾರ್ಯಕರ್ತರಿಂದ ನಿಂತಿದೆ ಅವರಿಂದಾಗಿಯೇ ಕಾಂಗ್ರೆಸ್ ಅಲ್ಲ ಎಂಬುದನ್ನು ನಿರೂಪಿಸ ಬೇಕಾಗಿದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬರೋದಿಲ್ಲ ಅಂತ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ, ಆದರೆ ಅವರು ಕಾಂಗ್ರೆಸ್ ೧೦೦ ಸ್ಥಾನ ಬಿಜೆಪಿ ೧೦೦ ಸ್ಥಾನ ಪಡೆಯಲಿ ನಾವು ೨೦ ರಿಂದ ೩೦ ಸ್ಥಾನ ಪಡೆದು ಅಧಿಕಾರ ಮಾಡೋಣ ಅಂತ ಸರ್ಕಸ್ ಮಾಡುತ್ತಾ ಇದ್ದಾರೆ ಅಷ್ಟೇ ಎಂದು ಹೇಳಿದರು.
ಬಿಜೆಪಿ ಪಕ್ಷವು ಪ್ರತಿನಿತ್ಯ ಒಂದಲ್ಲ ಒಂದು ಭ್ರಷ್ಟಾಚಾರ ಪ್ರಕರಣಗಳ ಕೇಳುವಂತಾಗಿದೆ ಶೇ.೪೦ ಸರಕಾರವನ್ನು ಕಿತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ, ಅದರಿಂದಾಗಿ ಮುಂದಿನ ೨೦೨೩ ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲು ಆಗಿದೆ, ಸಿದ್ದರಾಮಯ್ಯರ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಲ್ಕು ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಎಲ್ಲರೂ ಶ್ರಮವಹಿಸಬೇಕು ಎಂದರು.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಎನ್.ನಾರಾಯಣಸ್ವಾಮಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಲು ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದು ಆಶಿಸಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅಧಿಕಾರ ಅನುಭವಿಸಿದ ಗಿರಾಕಿ ನೀನು ನನ್ನ ಬಗ್ಗೆ ಆರೋಪ ಮಾಡುತ್ತೀಯಾ, ಅಭಿವೃದ್ಧಿ ಮಾಡಿಲ್ಲ ಅಂತ ಭಾಷಣ ಮಾಡುತ್ತಾರೆ, ನಿಮ್ಮ ಮನೆ ಮುಂದೆ ಸಿಮೆಂಟ್‌ನ ಕಾಂಕ್ರೀಟ್ ರಸ್ತೆ ಮಾಡಿಸಿದ್ದು ಯಾರಪ್ಪ? ಕೋಳಿ ಫಾರಂಗೆ ರಸ್ತೆ ಮಾಡಿಕೊಂಡಿದ್ದು ಯಾರು ಸ್ವಾಮಿ ? ಎಂದು ಪ್ರಶ್ನಿಸಿದರು.
ನಿಮ್ಮ ಸ್ವಂತ ಜಮೀನು ಉಳಿಸಲು ಜೆಸಿಬಿ ಮೂಲಕ ಬಡವರ ಮನೆ ನೆಲಸಮ ಮಾಡಿ ಬಡವರ ಮನೆ ಹಾಳು ಮಾಡಿದ ಗಿರಾಕಿ ನೀನು, ಎಸ್.ಎನ್ ನಾರಾಯಣಸ್ವಾಮಿ ದೌರ್ಜನ್ಯ ಮಾಡತ್ತಾನೆ ಅಂತಿಯಾ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ವಾಗ್ದಾಳಿ ನಡೆಸಿದರು.
ರಾಜ್ಯ-ಕೇಂದ್ರ ಬಿಜೆಪಿ ಡಬಲ್ ಇಂಜಿನ್ ಸರಕಾರಗಳು ಬಡವರ ರಕ್ತ ಹೀರುವ ಸರಕಾರಗಳಾಗಿವೆ, ಪ್ರತಿನಿತ್ಯ ಬೆಲೆ ಏರಿಕೆಯಿಂದಾಗಿ ಜನ ಸಂಕಷ್ಟಗಳಲ್ಲಿ ಮುಳಗಿದ್ದಾರೆ ಸರಕಾರ ದುಡ್ಡು ಕೊಡಲಿ, ಬಿಡಲಿ ಟವಲ್ ಹಾಸಿ ಹಣ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದರು.