ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಗಣೇಶ್‍ಪ್ರಸಾದ್ ಕರೆ

ಚಾಮರಾಜನಗರ, ಅ. 27- ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎಚ್.ಎಂ. ಗಣೇಶ್‍ಪ್ರಸಾದ್ ತಿಳಿಸಿದರು.
ತಾಲೂಕಿನ ಹರವೆಯಲ್ಲಿ ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಹರವೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಮ್ಮತದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಚುನಾವಣೆ ಎದುರಿಸಿ, ಹೆಚ್ಚಿನ ಸ್ಥಾನಗಳನ್ನು ಗೆದ್ದು, ಪಂಚಾಯಿತಿಯನ್ನು ನಮ್ಮದಾಗಿಸಿಕೊಳ್ಳೋಣ. ನಂತರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಗೆಲ್ಲುವ ಅಭ್ಯರ್ಥಿಯನ್ನು ಸೂಚಿಸಿದರೆ, ಸಂಘಟನ್ಮಾತಕವಾಗಿ ಕೆಲಸ ಮಾಡಲು ಸಾಧ್ಯವಿದೆ. ಆ ಶಕ್ತಿ ನಿಮ್ಮಲ್ಲಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರ ಹಿತವನ್ನು ಬಯಸಿ ಪಕ್ಷ ಸಂಘಟಿಸಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಕ್ತಿ ತುಂಬುವ ಕಾರ್ಯದಲ್ಲಿ ನಿರಂತರವಾಗಿ ನಿಮ್ಮೊಂದಿಗಿರುತ್ತೇನೆ ಎಂದು ತಿಳಿಸಿದರು.
ನಮ್ಮ ತಂದೆÀ ಎಚ್.ಎಸ್. ಮಹದೇವಪ್ರಸಾದ್ ಅವರೊಂದಿಗೆ ರಾಜಕೀಯ ಮಾಡುತ್ತಿದ್ದ ಹಿರಿಯರು ಬಳಷ್ಟು ಮಂದಿ ಇದ್ದೀರಿ. ಹಿರಿಯರೇ ನಮ್ಮ ಧಾರಸ್ತಂಭಗಳು. ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುನ್ನಡೆಯೋಣ. ಶಾಸಕರು ಹೇಳಿರುವಂತೆ ನಮ್ಮ ತಂದೆ ಸಂಪಾದನೆ ಮಾಡಿರುವ ಹಣವನ್ನು ಬಡವರ ಕಲ್ಯಾಣಕ್ಕಾಗಿ ಅವರ ಕಷ್ಟಕ್ಕೆ ವಿನಿಯೋಗ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನರಿಗೆ ಸ್ಪಂದಿಸುತ್ತೇನೆ ಎಂಬ ಅತ್ಮತೃಪ್ತಿ ಇದೆ. ಹಾಲಿ ಶಾಸಕರು ಯಾವ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ತಮ್ಮೆಗೆಲ್ಲ ಈಗಾಗಲೇ ತಿಳಿದಿದೆ ಎಂದು ವ್ಯಂಗ್ಯವಾಡಿದರು.
ಗುುಂಡ್ಲುಪೇಟೆ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುವುದು ನನ್ನ ಗುರಿಯಾಗಿದೆ. ಕ್ಷೇತ್ರದ ಜನರು ಬಹಳ ಮುಕ್ತರು. ಬಿಜೆಪಿಯವರ ಮರಳು ಮಾತಿನ ಮೋಡಿಗೆ ಜೋತು ಬಿದ್ದು, ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿದರು. ಕ್ಷೇತ್ರದ ಜನರು ಹಾಗೂ ಬಿಜೆಪಿ ಮುಖಂಡರೇ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಬೇಕು. ಹರವೆ ಭಾಗದಲ್ಲಿ ನಮ್ಮ ಪಕ್ಷಕ್ಕೆ ನಿರೀಕ್ಷಿತ ಮಟ್ಟದ ಮತಗಳು ಬರುತ್ತಿಲ್ಲ. ನಮ್ಮ ತಂದೆಯವರು ಮಾಡಿರುವ ಕೆಲಸ ಕಾರ್ಯಗಳನ್ನು ಗಮನಿಸಿ, ಮತ ನೀಡಬೇಕು. ಅಲ್ಲದೇ ನನ್ನಿಂದ ಮತ್ತು ನಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳಿಂದ ಯಾವುದೇ ಲೋಪವಾಗಿದ್ದರು ನೇರವಾಗಿ ಹೇಳಿದರೆ, ತಿದ್ದುಕೊಳ್ಳುತ್ತೇವೆ. ನಿಮ್ಮ ಸೇವೆ ಮಾಡಲು ಸಿದ್ದರಿದ್ದೇವೆ. ಬಿಜೆಪಿ ಬಣ್ಣದ ಮಾತುಗಳಿಗೆ ಮಾರು ಹೋಗಬೇಡಿ. ದೇಶ ಹಾಗೂ ರಾಜ್ಯದ ಅಭಿವೃದ್ದಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾದ್ಯ ಎಂದರು.
ಈಗಾಗಲೇ ಗ್ರಾ.ಪಂ. ಚುನಾವಣೆ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳೂ ಹೆಚ್ಚಿದೆ. ಬ್ಲಾಕ್ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಸಭೆ ನಡೆಸಿ, ಸಂಘಟನೆ ಮಾಡೋಣ. ಪಂಚಾಯಿತಿ ಚುನಾವಣೆ ಸಂಬಂಧ ಒಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸ್ಥಳೀಯ ಮಟ್ಟದಲ್ಲಿ ಐವರು ವೀಕ್ಷಿಕರನ್ನು ನೇಮಕ ಮಾಡಿ, ಅವರಿಂದ ಸೂಕ್ತ ಅಭ್ಯರ್ಥಿಯ ಮಾಹಿತಿ ಪಡೆದು ಅವಕಾಶ ಮಾಡಿಕೊಡಲಾಗುತ್ತದೆ.ಯಾವುದೇ ಕಾರಣಕ್ಕೂ ನಮ್ಮಲ್ಲಿ ಒಡಕು ಉಂಟಾಗದಂತೆ ಎಚ್ಚರವಹಿಸಿ, ಈ ಲಾಭವನ್ನು ಬಿಜೆಪಿ ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು ಎಂದು ಗಣೇಶ್ ಪ್ರಸಾದ್ ತಿಳಿಸಿದರು.
ಜಿ.ಪಂ. ಸದಸ್ಯ ಕೆರೆಹಳ್ಳಿ ನವೀನ್ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಸುಳ್ಳುಗಾರರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ದೊಡ್ಡ ಸುಳ್ಳಗಾರರು. ಆದೇ ಹಾದಿಯಲ್ಲಿ ಆ ಪಕ್ಷದ ಕಾರ್ಯಕರ್ತರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದಲ್ಲಿದ್ದಾರೆ. ಪಂಚಾಯಿತಿಗೆ 20 ಮನೆಗಳನ್ನು ಮಂಜುರು ಮಾಡಿಸಿರುವುದಾಗಿ ಸುಳ್ಳು ಹೇಳಿ. ಮತ ಪಡೆಯಲು ಮುಂದಾಗಿದೆ. ಗ್ರಾಮ ಸಭೆ ಹಾಗು ಪಂಚಾಯಿತಿ ಅನುಮೋದನೆ ಇಲ್ಲದೇ ಮನೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ವಸತಿ ಸಚಿವರು ಇಲಾಖೆಗೆ ಬರೆದಿರುವ ಪತ್ರವನ್ನು ಇಟ್ಟುಕೊಂಡು ಬಿಜೆಪಿ ಶಾಸಕರು, ಹಾಗೂ ಪದಾಧಿಕಾರಿಗಳು ನಿಮ್ಮನ್ನು ವಂಚನೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕು ಅವರು ಮನೆಯನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ. ಇಂಥ ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದಿರುವ ಮೋದಿ ಹಾಗೂ ಯಡಿಯೂರಪ್ಪ ದೇಶದ ಜನರು ಹೆಚ್ಚು ದಿನ ನಂಬಿಸಲು ಸಾದ್ಯವಿಲ್ಲ ಎಂಬ ಸತ್ಯ ಬಹಿರಂಗವಾಗಬೇಕು. ಉತ್ತರ ಪ್ರದೇಶಲ್ಲಿ ಈಗ ಅಲ್ಲಿನ ಜನರು ಬಿಜೆಪಿ ವಿರುದ್ದ ಧಂಗೆ ಎದ್ದಿದ್ದಾರೆ. ನಮ್ಮ ಕರ್ನಾಟಕದಲ್ಲಿ ದಂಗೆ ಏಳುವ ದಿನ ದೂರವಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನಡೆಸಿ, ಅಭಿವೃದ್ದಿ ಮಾಡುವುದು ಚೆನ್ನಾಗಿ ಗೊತ್ತು. ಆದರೆ, ಬಿಜೆಪಿ ಅವರಿಗೆ ಪಕ್ಷದ ಸಂಘಟನೆ ಮಾಡುವುದು ಗೊತ್ತು. ಅಧಿಕಾರ ನಡೆಸುವುದು ತಿಳಿದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಭವಿಷ್ಯ ವಿದೆ. ಪಕ್ಷದ ಮುಖಂಡರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದ ಬಿಟ್ಟು ಹೋಗಿರುವರರು ಹಾಗೂ ಪಕ್ಷಕ್ಕೆ ಬರುವವರನ್ನು ಸ್ವಾಗತಿಸಿ, ಬಲಗೊಳಿಸಲು ಮುಂದಾಗೋಣ ಎಂದರು.
ಸಭೆಯಲ್ಲಿ ಕ್ಷೇತ್ರ ಆರು ಪಂಚಾಯಿತಿ ವ್ಯಾಪ್ತಿಯ ಪ್ರಮುಖರು ಪಕ್ಷದ ಸಂಘಟನೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ತಾ.ಪಂ. ಮಾಜಿ ಸದಸ್ಯರಾದ ಮುಕ್ಕಡಹಳ್ಳಿ ರವಿಕುಮಾರ್, ಉದಯಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಗುರುಸಿದ್ದೇಗೌಡ, ತಾ.ಪಂ ಸದಸ್ಯ ಬಿ.ಎಸ್. ರೇವಣ್ಣ, ಮುಖಂಡರಾದ ನಟರಾಜು, ಕೇತಹಳ್ಳಿ ಶಿವಪಾದಪ್ಪ, ಹೊಸಹಳ್ಳಿ ಮಧುಸೂಧನ್, ಹರವೆ ರಂಗಸ್ವಾಮಿ, ಕಲ್ಮಳ್ಳಿ ಶಿವಕುಮಾರ್, ಮಾದಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.