ಕಾರ್ಯಕರ್ತರಿಗೆ ಬೆಲೆ ನೀಡದ ಏಕಪಕ್ಷೀಯ ನಿರ್ಧಾರ

ಪುತ್ತೂರು, ಜೂ.೧- ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಎಂ.ಬಿ.ವಿಶ್ವನಾಥ ರೈ ಅವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸುವ ಮೂಲಕ ಪುತ್ತೂರಿನ ಕಾರ್ಯಕರ್ತರು, ನಾಯಕರ ಮಾತಿಗೆ ಬೆಲೆ ನೀಡದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ.
ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶಿಫಾರಸ್ಸು ಮತ್ತು ಒತ್ತಡಕ್ಕೆ ಮಣಿದು ವಿಶ್ವನಾಥ ರೈ ಹೆಸರು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.
ನೂತನ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚಿಸಲು ತುರ್ತಾಗಿ ಬೆಂಗಳೂರಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷರು, ಮುಖಂಡರು ಸೂಚಿಸಿದಾಗ ನಾನು ಹೊಗಿದ್ದೆ. ಅಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಸ್ಥಳೀಯ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಹೊಸ ಅಧ್ಯಕ್ಷರ ನೇಮಕ ಮಾಡಬೇಕೆಂದು ನಾನು ಆಗ್ರಹಿಸಿದೆ. ಆದರೆ ಜಿಲ್ಲಾಧ್ಯಕ್ಷರು ಶಕುಂತಳಾ ಶೆಟ್ಟಿ ಅವರ ಇಚ್ಛೆಯಂತೆ ಎಂ.ಬಿ. ವಿಶ್ವನಾಥ ರೈ ಹೆಸರನ್ನು ಶಿಫಾರಸು ಮಾಡಿದ್ದರು. ಕೆಲ ವರ್ಷಗಳ ಹಿಂದೆ ವಿಶ್ವನಾಥ ರೈ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಕೆಲವೇ ಸಮಯದಲ್ಲಿ ಅವರನ್ನು ಕೆಪಿಸಿಸಿ ಸದಸ್ಯರನ್ನಾಗಿ ಮಾಡಲಾಗಿತ್ತು. ಈಗ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ನೇಮಕವನ್ನು ಬೆಂಗಳೂರಿನಲ್ಲಿ ನೀವೇಕೆ ವಿರೋಧಿಸಲಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ ಪಕ್ಷದ ನಾಯಕರು ತೀರ್ಮಾನ ಕೈಗೊಂಡಾಗಿತ್ತು.
ನಾನು ನನ್ನ ಅಭಿಪ್ರಾಯ ಹೇಳಿದ್ದೇನೆಯೇ ಹೊರತು, ನಾಯಕರನ್ನು ವಿರೋಧಿಸಿ ಅಪರಾಧಿಯಾಗುವುದು ಸರಿಯಲ್ಲ ಎಂದುಕೊಂಡೆ. ಈ ನೇಮಕ ವಿಚಾರ ಪ್ರಕಟಿಸಿದ ಸಂದರ್ಭ ನಾನು ಒಪ್ಪಿಗೆ ಕೊಡದಿದ್ದರೂ ನಾಯಕರ ಜತೆಯಲ್ಲಿದ್ದೆ. ಪ್ರಸ್ತುತ ಎಂ.ಬಿ. ವಿಶ್ವನಾಥ ರೈ ಅವರ ನೇಮಕದ ವಿಚಾರದಲ್ಲಿ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುವ ಕೆಲಸ ಆಗುತ್ತಿದೆ ಎಂದವರು ತಿಳಿಸಿದರು.