ಕಾರ್ಯಕರ್ತರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ

ಹುಬ್ಬಳ್ಳಿ,ಜು28 : ಸುಳ್ಯ ತಾಲೂಕಿನ ನೆಟ್ಟಾ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ನಡೆದಿದ್ದು, ಖಂಡನೀಯವಾಗಿದೆ. ಹಿಂದೂ ಕಾರ್ಯಕರ್ತರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಹಿಂದೂಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ಬಿಜೆಪಿ ಸರ್ಕಾರದಲ್ಲಿ ರಕ್ಷಣೆ ಇಲ್ಲಾ. ಹಿಂದೂ ಕಾರ್ಯಕರ್ತರನ್ನು ರಾಜಕಾರಣಿಗಳು ಕೇವಲ ಅಧಿಕಾರಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಾರೆಯೇ ವಿನಃ ಕಾರ್ಯಕರ್ತರ ರಕ್ಷಣೆ ಹಾಗೂ ಸಹಾಯಕ್ಕಾಗಿ ಅಲ್ಲ ಇದು ಹಿಂದೂ ಕಾರ್ಯಕರ್ತ ಪ್ರವೀಣ ಅವರ ಹತ್ಯೆಯಲ್ಲಿ ಬಯಲಾಗಿದೆ ಎಂದರು.
ಹಿಂದುತ್ವದ ಸಂರಕ್ಷಣೆಯಾಗುತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ದು, ಶ್ಲಾಘನೀಯವಾಗಿದೆ. ಹಿಂದುತ್ವಕ್ಕೆ ಬೆಲೆ ಕೊಟ್ಟು ರಾಜೀನಾಮೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.
ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹತ್ಯೆಯಾದ ಪ್ರವೀಣ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ, ಪ್ರವೀಣ ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡ್ಸಿ ಪ್ರವೀಣ ಅವರ ಕನಸನ್ನು ನನಸು ಮಾಡಿ ಎಂದು ಆಗ್ರಹಿಸಿದರು.
ಇನ್ನೂ ಅಗಸ್ಟ್ 5 ರಂದು ರಾಜ್ಯದಲ್ಲಿ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಬ್ಯಾನ್ ಮಾಡುವಂತೆ ನಾವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ ಎಂದರು.