ಕಾರ್ಮಿಕ ಹೋರಾಟಗಳು ಬಲಗೊಳ್ಳಬೇಕಾಗಿದೆ

ದಾವಣಗೆರೆ.ಮೇ.೧;  ಇಂದು ಪ್ರತಿಯೊಂದು ಹೋರಾಟಗಳು ಕೂಡ ಯಾವುದೋ ಒಂದು ವ್ಯವಸ್ಥೆಗೆ ಅವಲಂಬಿತವಾಗಿ ಇಲ್ಲವೇ ಕೆಲವರ ಹಿತಾಸಕ್ತಿಗೆ ತಕ್ಕಂತೆ ತನ್ನದೇ ‌ಆದ‌ ನೆಲೆಯಲ್ಲಿ ಸಾಗುತ್ತಿರುವುದು ದುರಂತದ ಸಂಗತಿ ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್ .ಅರುಣ್ ಕುಮಾರ್ ಆತಂಕ ವ್ಯಕ್ತಪಡಿಸಿದರು.ನಗರದ  ವನಿತಾ ಸಮಾಜದಲ್ಲಿ ಎಐಯುಟಿಯುಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಎಲ್ಲಾ ಪಕ್ಷಗಳಲ್ಲಿ ಕಾರ್ಮಿಕ ಸಂಘಟನೆಯನ್ನು ಕಾಣುತ್ತಿದ್ದೇವೆ. ಸಮಾಜವಾದಿ ಸಂಘಟನೆಯನ್ನು ನಿರ್ಮಿಸುವ ಸಮ ಸಮಾಜವನ್ನು ನಿರ್ಮಿಸುವ ಸಾಮರ್ಥ, ಸಮಾನತೆಯನ್ನು ಕಾಣುವಂತಹ ಸಂಘಟನೆಗಳು ಮರೆಯಾಗುತ್ತಿವೆ. ಈ ಹಿಂದೆ ಕಾರ್ಮಿಕರ ಉಳಿವಿಗಾಗಿ ಜೀವವನ್ನೇ ಬಲಿದಾನ ಮಾಡಿದ ಮಹನೀಯರ ತತ್ವ ಆದರ್ಶಗಳು ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರುಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ದುಡಿಯುವ ವರ್ಗಗಳು ತೀರಾ ಕಷ್ಟಕರ ಪರಿಸ್ಥಿತಿಯಲ್ಲಿ ಇವೆ. ಇಂದು ನಮ್ಮನ್ನು ಆಳುವ ಸರ್ಕಾರಗಳು ಪ್ರತಿಯೊಂದು ಕ್ಷೇತ್ರಗಳನ್ನು  ಹಂತಹಂತವಾಗಿ ಖಾಸಗಿಕಾರಣ ಮಾಡುವ ಕಡೆಗೆ ಸಾಗುತ್ತಿವೆ. ಕಾರ್ಮಿಕರ ಹೋರಾಟ ಜೀವಂತವಾಗಿ ಇರಿಸಬೇಕಾದರೆ ಮಹನೀಯರ ತತ್ವ ಆದರ್ಶಗಳ ಅಡಿಯಲ್ಲಿ ಸಂಘಟನೆಗಳನ್ನು ಕಟ್ಟುವ ಅಗತ್ಯ ಹೆಚ್ಚಾಗಿದೆ ಎಂದು ಕರೆ ನೀಡಿದರು.ರೈತ, ಕಾರ್ಮಿಕ ವರ್ಗದ ಹೋರಾಟಗಳನ್ನು ನಾವು ಜೀವಂತವಾಗಿ ಇರಿಸಬೇಕಾದರೆ ರೈತ ಮತ್ತು ಕಾರ್ಮಿಕ ಹೋರಾಟಗಳು ಬಲಗೊಳ್ಳಬೇಕಾಗಿದೆ. ಮೂಲ ತತ್ವ ಸಿದ್ಧಾಂತದ ಅಡಿಯಲ್ಲಿ ನಾವು ಹೋರಾಟ ನಡೆಸಿದರೆ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.ಇಂದಿನ ರಾಜಕೀಯ ವ್ಯವಸ್ಥೆ ನಮ್ಮ ಪ್ರತಿಯೊಂದು ಸಂಘಟನೆಗಳನ್ನು ನಿಶಕ್ತಗೊಳಿಸುವ ಮೂಲಕ ಐಕ್ಯತೆಗಳನ್ನು ಹೊಡೆದು ಹಾಕುತ್ತಿವೆ. ಕಾರಣ ಅಲ್ಲಿನ ಪರಿಸ್ಥಿತಿಗಳನ್ನು  ಅರಿತುಕೊಂಡು ಕಾರ್ಮಿಕರ ಸಂಘಟನೆಗಳನ್ನು ಬಲ ಪಡಿಸಿಕೊಳ್ಳಲು ಹೋರಾಟಕ್ಕೆ ಮುಂದಾಗಬೇಕಾಗಿದೆ. ಸಂಘಟನೆಗಳನ್ನು ನಾಶಗೊಳಿಸುವ ಇಂದಿನ ನಮ್ಮ ವಿದ್ಯಮಾನಗಳಲ್ಲಿ ಸಂಘಟನೆಗಳು ಸೂಕ್ಷ್ಮತೆಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡುವ ಮೂಲಕ ಯುವ ಪೀಳಿಗೆಯಲ್ಲಿ ಸಮಾಜವಾದದ ಚಿಂತನೆಯನ್ನು ತುಂಬಬೇಕಾಗಿದೆ ಎಂದು ಕರೆ ನೀಡಿದರು