ಕಾರ್ಮಿಕ ಸಂಘಟನೆಗಳಿಂದ ಕಪ್ಪು ದಿನಾಚರಣೆ

ದಾವಣಗೆರೆ. ಮೇ.೨೬; ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಸಿಐಟಿಯು, ಎಸ್ಎಫ್ಐ, ಕೆ.ಪಿ.ಆರ್.ಎಸ್, ಡಿ.ವೈ.ಎಫ್.ಐ. ಎ.ಐ.ಡಿ.ಡಬ್ಲ್ಯು.ಎ.ಜಿಲ್ಲಾ ಸಮಿತಿಗಳ ಸದಸ್ಯರು ಮನೆ-ಮನೆ ಗಳಿಂದಲೇ ಪ್ರತಿಭಟನೆ ನಡೆಸಿದರು.ಜನ ವಿರೋಧಿ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರ ಐತಿಹಾಸಿಕ ಹೋರಾಟವು ಇಂದು ಮೇ 26ಕ್ಕೆ 6 ತಿಂಗಳು ಪೂರ್ಣಗೊಳ್ಳಲಿದೆ. ಟ್ರೇಡ್ ಯೂನಿಯನ್ಗಳ ಅಖಿಲ ಭಾರತ ಮುಷ್ಕರವೂ 6 ತಿಂಗಳುಗಳನ್ನು ಪೂರ್ತಿಗೊಳಿಸಿದೆ. ಜೊತೆಗೆ ದೇಶದಲ್ಲಿ ಮಾರಣಾಂತಿಕ ಕೋವಿಡ್ ಸೋಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಸಮರ್ಪಕ ಚಿಕಿತ್ಸೆ ಸಿಗಲಾರದೇ ಸಾವೀಗೀಡಾಗುತ್ತಿದ್ದಾರೆ. ಇನ್ನೊಂದೆಡೆ ಸರಕಾರಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇಕಾಬಿಟ್ಟಿ ಲಾಕ್ಡೌನ್ ಘೋಷಿಸಿರುವುದರಿಂದಾಗಿ ಅಗತ್ಯ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಜನತೆ ಸಾಯುವಂತಾಗಿದೆ.  ಇದ್ದ ದುಡಿಮೆಯನ್ನು ಕಳೆದುಕೊಂಡು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ತೀವ್ರವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಮಧ್ಯೆಯೇ ಜನತೆ ಇದ್ದ ದುಡಿಮೆಯನ್ನು ಕಳೆದುಕೊಂಡು ಕಂಗಾಲಾಗಿರುವ ಕೆಟ್ಟ ಸ್ಥಿತಿ, ಆಹಾರದ ಕೊರತೆ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಆಸ್ಪತ್ರೆಗಳು, ಔಷಧಿ, ಅಕ್ಸಿಜನ್, ವೆಂಟಿಲೇಟರ್, ಸಿಬ್ಬಂದಿ ನೇಮಕ ಇತ್ಯಾದಿ ಸೌಲಭ್ಯಗಳನ್ನು ಹಾಗೂ ಅಹಾರ ಭದ್ರತೆ ಒದಗಿಸಿ ಜನರ ಪ್ರಾಣಗಳನ್ನು ರಕ್ಷಿಸಬೇಕಾದ ಸರಕಾರ ಹೃದಯಹೀನವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ನಿರ್ಲಜ್ಜವಾಗಿ ಅನುಸರಿಸುತ್ತಿರುವುದು ಖಂಡನೀಯ.ಮೂರು ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ತಕ್ಷಣ ರದ್ದುಪಡಿಸಬೇಕೆಂದು  ಒತ್ತಾಯಿಸಿದರು.ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು. ಎಲ್ಲಾ ನಾಗರಿಕರಿಗೆ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ನೀಡಬೇಕು.ಖಾಸಗಿ ಆರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸಲು ತಕ್ಷಣವೇ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿಆನಂದರಾಜು ಕೆ.ಹೆಚ್.,ಅನಂತರಾಜು ಬಿ.ಎಂ. ಇ. ಶ್ರೀನಿವಾಸ, ಶ್ರೀನಿವಾಸಮೂರ್ತಿ, , ಅಂಜಿನಪ್ಪ, ಪ್ರವೀಣ್, ಇಮ್ರಾನ್, ಇಪ್ತೀಕರ್, ರಘುವೀರ್ ಇದ್ದರು.