ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ


ಧಾರವಾಡ, ಸೆ 24:ಕೇಂದ್ರ ಹಾಗೂ ರಾಜ್ಯ ಸರಕಾರಗಳ ಲೂಟಿಕೋರ ಕಾಪೆರ್Çೀರೇಟ್ ಕಂಪನಿಗಳ ಪರವಾದ ಮತ್ತು ರೈತ ಹಾಗೂ ಕಾರ್ಮಿಕರ ಮತ್ತು ಎಲ್ಲ ನಾಗರೀಕರ ವಿರುದ್ದವಾದ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆಪ್ಟಂಬರ್ 27ರ `ಭಾರತ ಬಂದ್’ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿ ಇಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್), ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ದೇಶದಲ್ಲಿನ 550ಕ್ಕೂ ಅಧಿಕ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಡಿ ಒಗ್ಗೂಡಿ ಭಾರತ ಬಂದ್ ಕರೆ ನೀಡಿದೆ. ದೇಶದ ಎಲ್ಲಾ ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಮತ್ತು ದಲಿತ ಸಂಘಟನೆಗಳು ಹಾಗೂ ಎಡಪಕ್ಷಗಳು ಬೆಂಬಲಿಸಿ ಭಾಗಿಯಾಗಿ ಯಶಸ್ವಿಗೊಳಿಸುವುದಾಗಿ ಘೋಷಿಸಿವೆ.
ಕರ್ನಾಟಕದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಮತ್ತು ರಾಜ್ಯದ ರೈತರು, ಕೂಲಿಕಾರರು, ಕಾರ್ಮಿಕರು, ದಲಿತರು, ವಿದ್ಯಾರ್ಥಿಗಳು, ಯುವಜನ ಮತ್ತು ಮಹಿಳಾ ಸಂಘಟನೆಗಳ ಒಗ್ಗೂಡಿ ರಚಿತಗೊಂಡಿರುವ ಸಂಯುಕ್ತ ಹೋರಾಟ – ಕರ್ನಾಟಕವು ಸಂಯುಕ್ತ ಕಿಸಾನ್ ಮೋರ್ಚಾದ ಹಕ್ಕೊತ್ತಾಯಗಳೊಂದಿಗೆ ರಾಜ್ಯ ಸರಕಾರದ ಕಾಪೆರ್Çರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಬಂದ್‍ಗೆ ಕರೆ ನೀಡಿದೆ.
ನಾವು ಎತ್ತುತ್ತಿರುವ ಪ್ರಶ್ನೆಗಳು ನ್ಯಾಯೋಚಿತವಾಗಿವೆ. ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳು, ನಾಲ್ಕು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು, ದೇಶದ ಗ್ರಾಹಕರನ್ನು ಲೂಟಿಗೊಳಪಡಿಸುವ ಕಾಳಸಂತೆಗೆ ವ್ಯಾಪಕ ಬೆಂಬಲ ನೀಡುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ಮತ್ತು ವಿದ್ಯುತ್ ರಂಗವೂ ಸೇರಿದಂತೆ ಎಲ್ಲಾ ಸಾರ್ವಜನಿಕ ರಂಗದ ಖಾಸಗೀಕರಣವನ್ನು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ತೆರಿಗೆಗಳನ್ನು ಈ ಕೂಡಲೇ ವಾಪಸ್ ಪಡೆಯಬೇಕು ಮತ್ತು ರೈತರ ಹಾಗೂ ಗ್ರಾಮೀಣ ಜನತೆಯ ಸಂರಕ್ಷಣೆಗಾಗಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಕಾಯ್ದೆ ಹಾಗೂ ಋಣಮುಕ್ತ ಕಾಯ್ದೆಗಳನ್ನು ಅಂಗೀಕರಿಸಿ ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರಕ್ಕೆ ಪ್ರತಿಭಟನಾಗಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಡಪಕ್ಷಗಳ ಜಿಲ್ಲಾ ನಾಯಕರಾದ ಮಹೇಶ್ ಪತ್ತಾರ್, ಬಿ.ಐ. ಇಳಿಗೇರ, ರಾಮಾಂಜನಪ್ಪ ಆಲ್ದಳ್ಳಿ, ಕರಿಯಣ್ಣವರ,ಎಂ.ಎಚ್ ಮುಲ್ಲಾ ಲಕ್ಷ್ಮಣ ಜಡಗಣ್ಣವರ, ಗಂಗಾಧರ ಬಡಿಗೇರ, ಪಾಟೀಲ ಮುಂತಾದವರು ಭಾಗವಹಿಸಿದ್ದರು.