ಕಾರ್ಮಿಕ ಭವನಕ್ಕೆ ಮುತ್ತಿಗೆ: ನಕಲಿ ಫಲಾನುವಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ,ಸೆ.22: ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ಇತರೆ ವಸತಿ ಯೋಜನೆಗಳಲ್ಲಿ ನಕಲಿ ಫಲಾನುವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಾರ್ಯಕರ್ತರು ಗುರುವಾರ ಕಾರ್ಮಿಕರ ಭವನಕ್ಕೆ ಮುತ್ತಿಗೆ ಹಾಕಿ ಧರಣಿ ಮಾಡಿದರು.
ಪ್ರತಿಭಟನೆಕಾರರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ವಿವಿಧ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳಾಗಿ ನೊಂದಾಯಿಸುವ ಕ್ರಮವನ್ನು ಕೂಡಲೇ ಕೈಬಿಡುವಂತೆ, ನೊಂದಣಿಯಾದ ಫಲಾನುಭವಿಗಳಲ್ಲಿ ನೈಜ ಕಟ್ಟಡ ಕಾರ್ಮಿಕರಿದ್ದರೆ ಮಾತ್ರ ಪರಿಶೀಲಿಸಿ ಅವರ ಹೆಸರನ್ನು ಕಲ್ಯಾಣ ಮಂಡಳಿಯ ನೊಂದಣಿ ಉಳಿಸಿಕೊಂಡು ಇತರೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು. ಆದಾಗ್ಯೂ, ಅಂಥವರಿಗೂ ಮನೆಯ ಸಹಾಯಧನ ನೀಡಿದ್ದರೆ ಅದನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆ ಮೂಲಕ ನೊಂದಣಿಯನ್ನು ಕಾರ್ಮಿಕ ಇಲಾಖೆ ಮೂಲಕ ಮಾಡಿಸಿಕೊಂಡಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ, ಅಂಥವರ ನೊಂದಣಿಗೆ ಕಾರಣರಾದವರ ಕಾರ್ಮಿಕರ ನಿರೀಕ್ಷಕರು ಹಾಗು ಡಿಟಿಓಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಈಗಾಗಲೇ ಕೊಳಚೆ ನಿರ್ಮೂಲನೆ ಮಂಡಳಿಗೆ ಪಾವತಿಸಲಾದ 76 ಕೋಟಿ ರೂ.ಗಳನ್ನು ಕೂಡಲೇ ಮಂಡಳಿ ಖಾತೆಗೆ ವಾಪಸ್ಸು ಪಡೆಯಲು ಕ್ರಮ ಕೈಗೊಳ್ಳುವಂತೆ, ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾಗಿ ಐದು ವರ್ಷಗಳನ್ನು ಪೂರೈಸಿದ ಸದಸ್ಯರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಸಾಲ, ಸಹಾಯಧನ, ಮುಂಗಡ ಹಣ ಪಾವತಿ ಮಾಡುವ ಕ್ರಮ ಜಾರಿಗೊಳಿಸುವಂತೆ, ಈಗಾಗಲೇ 15 ವರ್ಷಗಳಿಂದ ನಿರಂತರವಾಗಿ ಕಲ್ಯಾಣ ಮಂಡಳಿಯಲ್ಲಿ ಸದಸ್ಯರಾಗಿರುವ, ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಕಾರ್ಮಿಕರಿಗೆ ಕೂಡಲೇ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವಂತೆ, 2022ನೇ ಸಾಲಿನಿಂದಲೇ ವಾರ್ಷಿಕವಾಗಿ ಕನಿಷ್ಠ 15000 ಕಾರ್ಮಿಕ ಕುಟುಂಬಗಳಿಗೆ ಅವರು ಸಲ್ಲಿಸಲಾಗುವ ಸ್ವಂತ ಭೂಮಿಯ ಆಧಾರದಲ್ಲಿ ಕಾರ್ಮಿಕ ವಸತಿ ನಿರ್ಮಾಣಕ್ಕಾಗಿ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವಂತೆ, ಇದಕ್ಕಾಗಿ ವಾರ್ಷಿಕ ಕನಿಷ್ಠ 300 ಕೋಟಿ ರೂ.ಗಳನ್ನು ತೆಗೆದಿರಿಸುವಂತೆ ಅವರು ಒತ್ತಾಯಿಸಿದರು.
ಮಂಡಳಿಯಲ್ಲಿ ಈಗ ಜಾರಿಯಲ್ಲಿರುವ ಸಜಿಎಚ್ ಆಧಾರಿತ ವೈದ್ಯಕೀಯ ಮರುಪಾವತಿ ಯೋಜನೆ ರದ್ದು ಮಾಡಿ ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ 2021 ನಗದು ರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸುವಂತೆ, ಎಸ್‍ಎಸ್‍ಪಿ ಪೋರ್ಟ್‍ನಲ್ಲಿ ಸಲ್ಲಿಸಿ ಬಾಕಿ ಇರುವ 60 ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಹಣ ಜಮಾ ಮಾಡುವಂತೆ, 2022-2023ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕಾಗಿ ಎಸ್‍ಎಸ್‍ಪಿ ಪೋರ್ಟಲ್ ಮೂಲಕ ಅರ್ಜಿ ಸ್ವೀಕಾರ ಕೂಡಲೇ ಆರಂಭಿಸುವಂತೆ, ಕಾರ್ಮಿಕರ ಹಿತದೃಷ್ಟಿಯಿಂದ ಸಲ್ಲಿಸಲಾದ ಕೆಲ ಬದಲಾವಣೆ, ತಿದ್ದುಪಡಿಗಳನ್ನು ಅಳವಡಿಸುವಂತೆ ಅವರು ಆಗ್ರಹಿಸಿದರು.
ಹೆಸರಿಗಷ್ಟೇ 19 ಸೌಲಭ್ಯಗಳು ಕಲ್ಯಾಣ ಮಂಡಳಿಯ ಪಟ್ಟಿಯಲ್ಲಿವೆ. ಆದಾಗ್ಯೂ, ಜಾರಿಯಲ್ಲಿಲ್ಲ. ರಾಜ್ಯದಲ್ಲಿ ಯಾರೊಬ್ಬರಿಗೂ ಅಥವಾ ಸಂಘಟನೆಯಡಿ ನೊಂದಾಯಿತರಾದ ಯಾವೊಬ್ಬ ಫಲಾನುಭವಿಗಳಿಗೂ ಸೌಲಭ್ಯಗಳು ಸಿಕ್ಕಿಲ್ಲ. ಸದರಿ ಸೌಲತ್ತುಗಳು ಫಲಾನುಭವಿಗಳಿಗೆ ಸಿಗುವಂತಾಗಲು ಅಗತ್ಯ ನಿಯಮಾವಳಿಗಳನ್ನು ರೂಪಿಸಿ ಜಾರಿಗೊಳಿಸುವಂತೆ, ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವುದು ಹಾಗೂ ಮಂಡಳಿಯ ನಿಯಮಾವಳಿ, ಸುಪ್ರಿಂಕೋರ್ಟ್ ನಿರ್ದೇಶನ ಪಾಲಿಸದೇ ಇರುವುದು ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದೆ. ಈ ವಿಚಾರದಲ್ಲಿ ತನಿಖೆಗೂ ಒತ್ತಾಯಿಸಿದ್ದೇವೆ. ಆದಾಗ್ಯೂ, ಮಂಡಳಿ ನಿರಂತರವಾಗಿ ಖರೀದಿಗಳನ್ನು ಮುಂದುವರೆಸುತ್ತಲೇ ಇದೆ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ 2021 ಮಾರ್ಚ್‍ನಲ್ಲಿ ನೀಡಿರುವ ಸ್ಪಷ್ಟ ನಿರ್ದೇಶನದಂತೆ ಯಾವುದೇ ಕಾರಣಕ್ಕೂ ಫಲಾನುಭವಿಗಳಿಗೆ ನೇರ ಹಣ ಮಾಡುವಂತೆ, ವಸ್ತುಗಳ ರೂಪದಲ್ಲಿ ಪರಿಹಾರ ಸಾಮಗ್ರಿಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಾಬು ಎಸ್. ಹೂವಿನಹಳ್ಳಿ, ಯಶವಂತ್ ಪಾಟೀಲ್, ಹಣಮಂತ್ ಎಸ್. ಗುತ್ತೇದಾರ್, ನಾಗಪ್ಪ ರಾಯಚೂರಕರ್, ಲಕ್ಷ್ಮಣ್ ಪಾಟೀಲ್, ರಾಮು ರಾಠೋಡ್ ಮುಂತಾದವರು ಪಾಲ್ಗೊಂಡಿದ್ದರು.