ಕಾರ್ಮಿಕ ಕಲ್ಯಾಣ ಜಾಗೃತಿ ರಥಕ್ಕೆ ಚಾಲನೆ

ಗದಗ, ಫೆ28: ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಇರುವ ಸೌಲಭ್ಯಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತಂತೆ ಜಾಗೃತಿ ಕಾರ್ಯಕ್ರಮಗಳ್ನು ಹಮ್ಮಿಕೊಳ್ಳಲಾಗಿದೆ. ಈ ಜಾಗೃತಿ ಅಭಿಯಾನದ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ನುಡಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಏರ್ಪಡಿಸಲಾದ ಕಾರ್ಮಿಕ ಕಲ್ಯಾಣ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನರ್ಹ ಕಾರ್ಮಿಕರು ನಕಲಿ ಗುರುತಿನ ಚೀಟಿಯನ್ನು ಹಿಂದಿರುಗಿಸಿ ನೋಂದಣಿಯನ್ನು ರದ್ದು ಪಡಿಸಿಕೊಳ್ಳಬೇಕು. ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂದರು.

ಕಟ್ಟಡ ಕಾರ್ಮಿಕರು ಅಲ್ಲದವರು ನಕಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾಗುವದು ಮತ್ತು ಸೌಲಭ್ಯಗಳನ್ನು ಪಡೆಯುವದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ಪ್ರಕಾರ ಕಾರ್ಮಿಕ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ ಮಾತನಾಡಿ ವಾಹನದ ಮೂಲಕ ನೋಂದಾಯಿತ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲ್ಲಿ ಒಟ್ಟು 1,06,000 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಅನರ್ಹ ಕಾರ್ಮಿಕರನ್ನು ಗುರುತಿಸಿ ನಕಲಿ ಗುರುತಿನ ಚೀಟಿಯನ್ನು ಹಿಂಪಡೆಯಲು ಅಭಿಯಾನವನ್ನು ಸಹ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 3000ಕ್ಕೂ ಅಧಿಕ ಅನರ್ಹ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಲಾಗಿದೆ. ನಕಲಿ ಗುರುತಿನ ಚೀಟಿ ಹಿಂದಿರುಗಿಸಿ ನೋಂದಣಿಯನ್ನು ರದ್ದುಪಡಿಸಿಕೊಳ್ಳಿ ಎಂಬ ಅಭಿಯಾನವನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಂದೇಶ ಪಾಟೀಲ, ಕಾರ್ಮಿಕ ನಿರೀಕ್ಷಕರಾದ ಉಮೆಶ ಹುಲ್ಲಣ್ಣವರ ಸೇರಿದಂತೆ ಇತರರು ಇದ್ದರು.