ಕಾರ್ಮಿಕ ಇಲಾಖೆಯಿಂದ ಕೋವಿಡ್ ಪರಿಹಾರ: ಮಧ್ಯವರ್ತಿಗಳಿಗೆ ಹಣ ಹಾಗೂ ದಾಖಲೆಗಳನ್ನು ನೀಡದಿರಲು ಸೂಚನೆ

ಕಲಬುರಗಿ,ಮೇ.27:ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರವು ಕೋವಿಡ್-19 ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪರಿಹಾರವನ್ನು ಪಡೆಯಲು ಕಾರ್ಮಿಕ ಇಲಾಖೆಯು ಯಾವುದೇ ದಾಖಲೆಗಳನ್ನು ಕೇಳಿರುವುದಿಲ್ಲ ಹಾಗೂ ಯಾರಿಗೂ ಸಹ ನಿರ್ದೇಶನ ನೀಡಿರುವುದಿಲ್ಲ. ಆದ್ದರಿಂದ ಮಧ್ಯವರ್ತಿಗಳಿಗೆ ಹಣ ಹಾಗೂ ಯಾವುದೇ ದಾಖಲೆಗಳನ್ನು ನೀಡಬಾರದೆಂದು ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಡಿ.ಜಿ. ನಾಗೇಶ ಅವರು ತಿಳಿಸಿದ್ದಾರೆ.

ಕೆಲವು ಮಧ್ಯವರ್ತಿಗಳು, ಸಂಘ-ಸಂಸ್ಥೆಗಳು ಹಾಗೂ ಕಾರ್ಮಿಕ ಬಂದುಗಳು ಹಣ ಪಡೆದು ಗುರುತಿನ ಚೀಟಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ಗಳ ಜಿರಾಕ್ಸ್ ಪ್ರತಿಗಳ ದಾಖಲೆಗಳನ್ನು ಪಡೆಯುತ್ತಿರುವ ಬಗ್ಗೆ ದೂರು ಬಂದಿರುತ್ತದೆ.

ರಾಜ್ಯ ಸರ್ಕಾರವು ಕಾರ್ಮಿಕ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ 3000 ರೂ. ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಡಿಯಲ್ಲಿ ನೋಂದಾಯಿಸಿದ ಹಮಾಲರು, ಮನೆ ಕೆಲಸದವರು, ಚಿಂದಿ ಆಯುವವರು, ಟೇಲರ್‍ಗಳು, ಮೆಕ್ಯಾನಿಕ್, ಅಕ್ಕಸಾಲಿಗರು, ಅಗಸರು, ಕಮ್ಮಾರರು, ಭಟ್ಟಿ ಕಾರ್ಮಿಕರು, ಕ್ಷೌರಿಕರು, ಕುಂಬಾರರು ಹಾಗೂ ಚಮ್ಮಾರರಿಗೆ 2000 ರೂ. ಗಳ ಕೋವಿಡ್-19 ಪರಿಹಾರ ಘೋಷಣೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.