ಕಾರ್ಮಿಕರ ಸಮಸ್ಯೆ ಆಲಿಸಲು, ಪರಿಹಾರ ಒದಗಿಸಲು ಕಾರ್ಮಿಕ ಅದಾಲತ್ 2.0


ಚಿತ್ರದುರ್ಗ.ಜು.17;ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್‍ನಡಿ ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಹಾಗೂ ಕಾರ್ಮಿಕರ ಸಮಸ್ಯೆ ಆಲಿಸಲು ಇ-ಶ್ರಮ್ ಪೋರ್ಟಾಲ್‍ನಲ್ಲಿ ನೋಂದಾಯಿಸಿಕೊಂಡು ಪರಿಹಾರ ಪಡೆಯಲು ಜುಲೈ  30ರವರೆಗೆ ಕಾರ್ಮಿಕರ ಅದಾಲತ್ 2.0 ಆಯೋಜಿಸಲಾಗಿದೆ.
ನಗರದ ಜೆ.ಸಿ.ಆರ್.ಬಡಾವಣೆಯ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಎಲ್ಲಾ ವರ್ಗದ ಕಾರ್ಮಿಕ ಸಂಘಟನೆಗಳು ಹಾಗೂ ಪದಾಧಿಕಾರಿಗಳೊಂದಿಗೆ ಈ ಕುರಿತು ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಚರ್ಚಿಸಿದರು.ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಮತ್ತು ರಾಜ್ಯಾಡಳಿತ ಪ್ರದೇಶಗಳಿಗೆ ಅಸಂಘಟಿತ ಕಾರ್ಮಿಕರನ್ನು ನೊಂದಾಯಿಸುವ ಗುರಿಯನ್ನು ನೀಡಲಾಗಿತ್ತು. ಗುರಿ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಇ-ಶ್ರಮ ಪೋರ್ಟ್‍ನಲ್ಲಿ ನೋಂದಾಯಿಸಿಕೊಳ್ಳಬೇಕು.
ಅಸಂಘಟಿತ ಕಾರ್ಮಿಕ ವಲಯಗಳಾದ ಕಟ್ಟಡ ಮತ್ತು ಇತರೆ ನಿರ್ಮಾಣ, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿದ ಸುಮಾರು 156 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು ಇತರೆ ವರ್ಗಗಳ ಅಡಿಯಲ್ಲಿ ನೋಂದಾಣಿಯಾಗಬಹುದು.ಇ-ಶ್ರಮ್ ನೋಂದಣಿಗೆ ಪ್ರಯೋಜನಗಳು: ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳು ಪಡೆಯಲು ಅನುಕೂಲ, ಅಸಂಘಟಿತ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಸಹಕಾರಿ, 1 ವರ್ಷದ ಅವಧಿಗೆ ಪ್ರಧಾನಿಮಂತ್ರಿ ಸುರಕ್ಷಾ ಬೀಮಾ ಯೋಜನೆ ಪ್ರಯೋಜನ ಪಡೆಯಲು ಸಹಾಯಕಾರಿಯಾಗಿದೆ.
ಇ-ಶ್ರಮ್ ನೋಂದಣಿಗೆ ಬೇಕಾದ ಅಗತ್ಯ ದಾಖಲಾತಿಗಳು : ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಪುಸ್ತಕ ಬೇಕು.
ಇ-ಶ್ರಮ್ ನೋಂದಣಿಗೆ ಬೇಕಾದ ಅರ್ಹತೆ: 16ರಿಂದ 59ವರ್ಷದ ವಯೋಮಾನದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯ ನಿಧಿ ಹಾಗೂ ಇಎಸ್‍ಐ ಫಲಾನುಭವಿಯಾಗಿರಬಾರದು.ಸಭೆಯಲ್ಲಿ ಕಾರ್ಮಿಕ ನಿರೀಕ್ಷಕರಾದ ಡಿ.ರಾಜಣ್ಣ, ಇ-ಶ್ರಮ್ ಕಾರ್ಡ್‍ನ ರಾಘವೇಂದ್ರ, ಕಟ್ಟಡ ಕಾರ್ಮಿಕರು ಸಂಘದ ಪದಾಧಿಕಾರಿಗಳು ಇದ್ದರು.