ಕಾರ್ಮಿಕರ ಮಕ್ಕಳ ಶಿಶುಪಾಲನಾ ಕೇಂದ್ರ ಸ್ಥಾಪನೆಗೆ ಒತ್ತಾಯ

ಕೋಲಾರ,ಜು,೯-ಜಿಲ್ಲೆಗೆ ಹೊಂದಿಕೊಂಡಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಿದ್ದು, ಇಲ್ಲಿ ಕಟ್ಟಡ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಭಾಗದಲ್ಲಿ ಅತಿಹೆಚ್ಚು ಶಿಶುಪಾಲನಾ ಕೇಂದ್ರಗಳನ್ನು ತೆರೆಯುವಂತೆ ಇಂಚರ ಗೋವಿಂದರಾಜು ಸರ್ಕಾರವನ್ನು ಒತ್ತಾಯಿಸಿದ ವೇಳೆ ಸಂಚಾರಿ ಶಿಶುಪಾಲನಾ ಕೇಂದ್ರ ತೆರೆಯುವ ಕುರಿತು ಸಚಿವ ಸಂತೋಷ್‌ಲಾಡ್ ಭರವಸೆ ನೀಡಿದರು.
ಕೋಲಾರ ಜಿಲ್ಲೆಯಲ್ಲಿರುವ ಕಟ್ಟಡ ಕಾರ್ಮಿಕರ ೬ ವರ್ಷದೊಳಗಿನ ಮಕ್ಕಳ ಪಾಲನೆ ಮಾಡಲು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯೇ. ಹಾಗಿದ್ದಲ್ಲಿ ಇದುವರೆಗೂ ಮಕ್ಕಳ ಶಿಶುಪಾಲನಾ ಮಾಡಲಾಗಿರುವ ಸಂಖ್ಯೆಯೆಷ್ಟು ಎಂಬುದಾಗಿ ಹಾಗೂ ಕಾರ್ಮಿಕ ಇಲಾಖೆಯಿಂದ ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗಾಗಿ ಆಯವ್ಯಯದಲ್ಲಿ ಎಷ್ಟು ಅನುದಾನ ನಿಗದಿಪಡಿಸಲಾಗಿದೆ. ನಿಗದಿಪಡಿಸಿದ್ದಲ್ಲಿ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದೆಯೇ, ಒಟ್ಟಾರೆಯಾಗಿ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಿಲ್ಲ ಎಂದಾದರೇ ಪ್ರಾರಂಭಿಸಲು ಸರ್ಕಾರ ಯೋಜನೆ ರೂಪಿಸಿದೆಯೇ ಎಂದು ಇಂಚರ ಪ್ರಶ್ನಿಸಿದರು.
ಸದರಿ ಶಿಶುಪಾಲನಾ ಕೇಂದ್ರಗಳಿಂದ ಇದುವರೆಗೂ ಒಟ್ಟು ೧೬೮ ಮಕ್ಕಳು ಸೌಲಭ್ಯ ಪಡೆದಿದ್ದಾರೆ, ಕೋಲಾರದ ಗಾಂಧಿನಗರ, ಕೆಜಿಎಫ್ ಮತ್ತು ಬಂಗಾರಪೇಟೆ ಕೇಂದ್ರಗಳಿವೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶಿಶುಪಾಲನ ಸೌಲಭ್ಯದ ಯೋಜನೆಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ ಹಾಗೂ ವೆಚ್ಚ ಮಾಡಿದ ಅನುದಾನ ೨೦೨೦-೨೧ ನೇ ಸಾಲಿನಲ್ಲಿ ರೂ. ೩೦.೦೦ ಲಕ್ಷ, ೨೦೨೧-೨೨ ರಲ್ಲಿ ರೂ.೪೦ ಲಕ್ಷ, ೨೦೨೨-೨೩ ರಲ್ಲಿ ರೂ. ೫೦.೦೦ ಲಕ್ಷ, ಒಟ್ಟು ೧೨೦.೦೦ ಲಕ್ಷ ರೂ. ಹಣವನ್ನು ನಿಗದಿಗೊಳಿಸಿದ ಅನುದಾನದಲ್ಲಿ, ೧೩.೮೦ ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಸಚಿವರು ಉತ್ತರ ನೀಡಿದರು.