ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ನೀಡಲು ಒತ್ತಾಯ; ಪ್ರತಿಭಟನೆ

ದಾವಣಗೆರೆ.ನ.೧೦; 2022 -23 ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರು ಕಾರ್ಮಿಕ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ನಂತರ ಸಹಾಯಕ ಕಾರ್ಮಿಕ ಆಯುಕ್ತರ ಮೂಲಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಪ್ರತಿವರ್ಷ ಶೈಕ್ಷಣಿಕ ಸಹಾಯಧನ ನೀಡುತ್ತಿರುವುದು ಸರಿಯಷ್ಟೇ. ಆದರೆ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಇದುವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡದೇ, ವಿಳಂಬ ಮಾಡುತ್ತಿರುವುದು ಖಂಡನೀಯ. ಈ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದರೂ ಶೈಕ್ಷಣಿಕ ಧನಸಹಾಯ ಪಡೆಯಲು ಅರ್ಜಿ ಆಹ್ವಾನಿಸದೇ ಇರುವುದು ಕೂಲಿ ಕಾರ್ಮಿಕರಿಗೆ ಮಾಡುವ ಅನ್ಯಾಯವಾಗಿದೆ. ಈ ಸಂಬಂಧ ಮಂಡಳಿಯ ಕಾರ್ಯದರ್ಶಿಗಳ ಬಳಿ ಅನೇಕ ಬಾರಿ ಚರ್ಚಿಸಲಾಗಿದೆ. ಹಲವು ತಿಂಗಳುಗಳಿಂದ ಸದ್ಯದಲ್ಲೇ ಅರ್ಜಿ ಕರೆಯಲಾಗುವುದು ಎಂದು ಭರವಸೆಯ ಮಾತುಗಳು ಬಂದಿವೆ ಹೊರತು, ಕೊಟ್ಟ ಭರವಸೆಯಂತೆ ಜಾರಿಯಾಗಿಲ್ಲ. ವಿಳಂಬಕ್ಕೆ ಅನೇಕ ಕಾರಣಗಳನ್ನು ನೀಡಲಾಗಿದೆ. ಎಸ್.ಎಸ್.ಪಿ ಪೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಳಂಬವಾಗುತ್ತಿದ್ದು, ಅದನ್ನು ಪರಿಹರಿಸುವ ಕಾರ್ಯ ನಡೆದಿದೆ. ಶೀಘ್ರವೇ ಬಗೆಹರಿಯಲಿದೆ ಎಂಬ ಆಶ್ವಾಸನೆಯೂ ಸಿಕ್ಕಿತ್ತು. ಆದರೆ ಈ ಹೆಸರಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯ.ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು  ‘ಬೋಗಸ್ ಕಾರ್ಡುಗಳ ಹಾವಳಿಯನ್ನು ತಪ್ಪಿಸಬೇಕಿದೆ, ಅಲ್ಲಿಯವರೆಗೆ ಅರ್ಜಿ ಆಹ್ವಾನಿಸುವುದು ಕಷ್ಟ’ ಎಂದು ಮೌಖಿಕವಾಗಿ ಹೇಳಿದ್ದಾರೆ. ಕೂಡಲೇ‌ ಪರಿಶೀಲಿಸಿ  2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಪಡೆಯಲು ಈ ಕೂಡಲೇ ಅರ್ಜಿ ಆಹ್ವಾನಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಆನಂದರಾಜು ಕೆ.ಹೆಚ್., ನೇತ್ರಾವತಿ, ಪುಷ್ಪಲತಾ, ಆಲೂರು ಮಂಜುನಾಥ ಮತ್ತಿತರರಿದ್ದರು.