
ಕೋಲಾರ,ಸೆ೧೯:ವಿಶ್ವದ ಸಮಸ್ತ ಕಾರ್ಮಿಕರ ಆದಿ ಪುರುಷ ವಿಶ್ವಕರ್ಮರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಭಾರತ ಮಜ್ದೂರ್ ಸಂಘ ಆಚರಿಸುತ್ತಿದೆಯೆಂದು ಜಿಲ್ಲಾ ಭಾರತೀಯ ಮಜ್ದೂರು ಸಂಘದ ಅಧ್ಯಕ್ಷ ಶಿವಕುಮಾರ್ ಹೇಳಿದರು.
ನಗರದ ಗೌರಿಪೇಟೆಯಲ್ಲಿ ಭಾರತೀಯ ಮಜ್ದೂರು ಸಂಘದ ಕಚೇರಿಯಲ್ಲಿ ವಿಶ್ವಕರ್ಮ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವಕರ್ಮರು ಎಲ್ಲಾ ಕಾರ್ಮಿಕರಿಗೂ ಆದರ್ಶವಾಗಿರುವುದರಿಂದ ಅವರ ಜನ್ಮದಿನಾಚರಣೆಯಂದು ಸಕಲ ಕಾರ್ಮಿಕರ ಕೌಶಲ್ಯವನ್ನು ಗೌರವಿಸಬೇಕಾಗುತ್ತದೆಯೆಂದರು.
ಭಾರತೀಯ ಮಜ್ದೂರು ಸಂಘದ ಕಾರ್ಯದರ್ಶಿ ಸೋಮಣ್ಣ ಮಾತನಾಡಿ, ವಿಶ್ವಕರ್ಮರನ್ನು ಪ್ರಜಾಪತಿ, ಹಿರಣ್ಯಗರ್ಭ ಇತ್ಯಾದಿಯಾಗಿ ಕರೆಯುತ್ತಾರೆ, ವಿಶ್ವಕರ್ಮರು ದೇವಾನು ತ್ರಿಮೂರ್ತಿಗಳು ಸೇರಿದಂತೆ ದೇವತೆಗಳ ಮನೆಗಳನ್ನು ಅವರು ವಾಸಿಸುವ ನಗರವನ್ನು ಸೃಷ್ಟಿಸಿಕೊಟ್ಟವರಾಗಿದ್ದಾರೆ. ಜಗತ್ತಿನ ಸೃಷ್ಟಿಗೆ ಕಾರಣರಾದ ವಿಶ್ವಕರ್ಮರನ್ನು ಭಾರತೀಯ ಮಜ್ದೂರು ಸಂಘವು ರಾಷ್ಟ್ರೀಯ ಸಮಸ್ತ ಕಾರ್ಮಿಕರಿಗೆ ಗೌರವಿಸುವಂತೆ ಆಚರಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ವಿಶ್ವಕರ್ಮರು ಇಡೀ ವಿಶ್ವವನ್ನೇ ವಿನ್ಯಾಸಗೊಳಿಸಿದರು ಎಂಬ ನಂಬಿಕೆ ಭಾರತೀಯರಲ್ಲಿದ್ದು, ಇವರ ಜನ್ಮ ದಿನಾಚರಣೆಯು ಸಮಸ್ತ ಕಾರ್ಮಿಕರ ಕುಲಕ್ಕೆ ಕೀರ್ತಿ ತರುವಂತದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶ್ರೀನಿವಾಸಪುರದ ನಾಗಭೂಷಣ್, ಗೋಕುಲ ಚಲಪತಿ, ಶೇಖರ್ ಭಾರತೀಯ ಮಜ್ದೂರು ಸಂಘದ ಕಾರ್ಯಕರ್ತರು, ಸದಸ್ಯರು ಹಾಜರಿದ್ದರು.