ಕಾರ್ಮಿಕರು ಸಂಘಟಿತರಾಗಿ ಹಕ್ಕುಗಳನ್ನು ಪಡೆಯಿರಿಃ ದಾನೇಶ ಅವಟಿ

ವಿಜಯಪುರ, ಡಿ.21-ಅಸಂಘಟಿತ ವಲಯದ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ನ್ಯಾಯವಾದಿ ದಾನೇಶ ಅವಟಿ ಕರೆ ನೀಡಿದರು.
ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ದಿನಾಂಕ 19-12-2020 ರಂದು ಸಂಜೆ 6 ಗಂಟೆಗೆ ಜರುಗಿದ ಅಸಂಘಟಿತ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರು ತಮಗೆ ಸರಕಾರದಿಂದ ದೊರೆಯುವ ಸೌಲಭ್ಯಗಳಿಗಾಗಿ ಮತ್ತು ಇತರೆ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಯಿಂದ ಮತ್ತು ಕೋವಿಡ್‍ನಂತಹ ತುರ್ತು ಸಂದರ್ಭಗಳಲ್ಲಿ ಕಾರ್ಮಿಕರ ಸ್ಥಿತಿಗತಿ ದಯನೀಯವಾಗಿದ್ದು ಅವರು ಮಾಲಿಕರ ಉದ್ಯಮಿದಾರರ ಬಂಡವಾಳ ಶಾಹಿಗಳ ವಿರುದ್ಧ ಹೋರಾಡುವ ಸ್ಥಿತಿಯಲ್ಲಿಲ್ಲ ಆದರೆ ಶಾಂತಿಯುತ ಮಾರ್ಗದಲ್ಲಿ ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ವ್ಯವಸ್ಥಿತವಾಗಿ ಸರಕಾರದ ಮತ್ತು ಪ್ರಜಾಪ್ರತಿನಿಧಿಗಳ ಗಮನಕ್ಕೆ ತಂದು ಈಡೇರಿಸಿಕೊಳ್ಳಬೇಕೆಂದು ಅನಿವಾರ್ಯವಾದರೆ ಕಾನೂನಿನ ಮೊರೆ ಹೋಗಬೇಕೆಂದು ತಿಳಿಸಿದರು.
ಸಿ.ಎನ್.ಎಫ್.ಇ. ಸಂಸ್ಥೆಯ ಶ್ರೀಮತಿ ಕಾಮಿನಿ ಕಸಬೆ ಕಾರ್ಮಿಕರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸವಿವರವಾಗಿ ತಿಳಿಸಿದರು. ಅತಿಥಿಗಳಾಗಿ ಆನಂದ ಶಹಾಪೂರ, ಸಿಕಂದರ ದೇವಕುಳೆ, ಅಮೀನ ಹಳ್ಳಿ, ಶಬ್ಬಿರ ಶೇಖ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಮೊದಲಿಗೆ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಸರ್ವಧರ್ಮ ಪ್ರಾರ್ಥನಾಗೀತೆ ಸಲ್ಲಿಸಲಾಯಿತು. ಶ್ರೀಮತಿ ಮೀನಾಕ್ಷಿ ಸಿಂಗೆ ಸ್ವಾಗತಿಸಿ, ನಿರೂಪಿಸಿದರು. ಶ್ರೀಮತಿ ಸುನಂದಾ ನಾಯಕ ವಂದಿಸಿದರು.