ಬಳ್ಳಾರಿ,ಜೂ.1::ದೇಶದ ಅಭಿವೃದ್ಧಿಗೆ ಕಾರ್ಮಿಕರು ಭದ್ರಬುನಾದಿಯಾಗಿದ್ದು, ಉದ್ದಿಮೆಗಳಿಂದ ಕಾರ್ಮಿಕರು ತಮಗಿರುವ ಎಲ್ಲಾ ಸೌಲಭ್ಯಗಳನ್ನು ಕಾನೂನಿನಾತ್ಮಕವಾಗಿ ಪಡೆದುಕೊಂಡು, ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್.ಎನ್ ಹೊಸಮನೆ ಅವರು ಕರೆ ನೀಡಿದರು.
ನಗರದ ಹೊರವಲಯದ ಹಲಕುಂದಿಯ ವಿಆರ್‍ಕೆಪಿ ಸ್ಪಾಂಜ್ ಮತ್ತು ಐರನ್ ಪ್ಲಾಂಟ್ ಕಾರ್ಖಾನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ದಿನಾಚರಣೆ ಹಮ್ಮಿಕೊಳ್ಳುವ ಉದ್ದೇಶವು ಕಾರ್ಮಿಕರಿಗೆ ರಕ್ಷಣೆ, ಸೌಲಭ್ಯವನ್ನು ಪಡೆಯುವ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಮಿಕ ಅಧಿಕಾರಿ ಕಮಲ್‍ಷಾ ಅಲ್ತಾಪ್ ಅಹಮ್ಮದ್ ಅವರು ಪ್ರ್ರಾಸ್ತಾವಿಕವಾಗಿ ಮಾತಾನಾಡಿ, ಕಾರ್ಮಿಕರು ಹೋರಾಟ ನಡೆಸಿ ಕಾರ್ಮಿಕರ ರಕ್ಷಣೆ, ಅವರ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ಕಾರ್ಮಿಕರ ಸಂಘಟನೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕಾರ್ಮಿಕರು ತಮ್ಮ ರಕ್ಷಣೆಗಾಗಿ ಸರ್ಕಾರವು ರೂಪಿಸಿರುವ ಕಾನೂನುಗಳ ಬಗ್ಗೆ ತಿಳಿದುಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ.ಎಸ್.ಪಿ.ಎಫ್ ಎನ್‍ಪೋರ್ಸ್‍ಮೆಂಟ್‍ನ ವೇಣುಗೊಪಾಲ್ ಅವರು, ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸೋಷಿಯಲ್ ಸೆಕ್ಯೂರಿಟಿ ಆಫೀಸರ್ ಹಾಗೂ ಇ.ಎಸ್.ಐ ಬ್ರಾಂಚ್ ಮ್ಯಾನೇಜರ್ ಮನ್ನೆರಾಜಕುಮಾರ ಅವರು, ಕಾರ್ಮಿಕರ ಕುಟುಂಬದ ರಕ್ಷಣೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಎಸ್.ಐ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಪಿ.ಎಫ್ ಎನ್‍ಪೋರ್ಸಮೆಂಟ್‍ನ ಅಬ್ದುಲ್ ಹಪೀಜ್, ಸಂಜಯ್, ಸಂದೀಪ್ ಸೇರಿದಂತೆ ಹೆಚ್.ಆರ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.