ಕಾರ್ಮಿಕರು ಆರೋಗ್ಯಕಾಪಾಡಿಕೊಳ್ಳಲು ಕರೆ

ಕೆಂಗೇರಿ,ಜ.೩೧:ಬಡವರು ಮಧ್ಯಮ ವರ್ಗದವರು ಕೂಲಿ ಕಾರ್ಮಿಕರು ಹಾಗೂ ವಿಶೇಷವಾಗಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ನಿಗಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಕಡೆಗೆ ದೃಢ ಹೆಜ್ಜೆ ಇಡಬೇಕೆಂದು ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಹೆಚ್. ಹೇಳಿದರು .
ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಲ್ಲಿ ಗ್ರಾಮದ ಕಾಂಗ್ರೆಸ್ ಕಛೇರಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನೆಯಲ್ಲಿ ಮಹಿಳೆಯರು ಮನೆಯಲ್ಲಿರುವ ಎಲ್ಲರ ಆರೋಗ್ಯ ಸುರಕ್ಷತೆ ಬಗ್ಗೆ ನಿಗಾ ವಹಿಸುತ್ತಾರೆ.
ಆದರೆ ಮಹಿಳೆಯರು ಸಂಸಾರದ ಜಂಜಾಟದಲ್ಲಿ ಮುಳುಗಿ ಸ್ವತಃ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸುವುದಿಲ್ಲ, ಅನಾರೋಗ್ಯಕ್ಕೆ ತುತ್ತಾದಾಗ ಚಿಕಿತ್ಸೆಗಾಗಿ ಪರದಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ಮಹಿಳೆಯರು, ಕಾರ್ಮಿಕರು ಕಣ್ಣಿನ ತಪಾಸಣೆ, ಹೃದಯ ರೋಗ ತಪಾಸಣೆ, ಇ.ಸಿ.ಜಿ., ಥೈರಾಯಿಡ್, ಕಿವಿ, ಮೂಗು, ಗಂಟಲು ತಪಾಸಣೆ, ಬಿಪಿ/ ಶುಗರ್, ಹಾಗೂ ಸಾಮಾನ್ಯ ರೋಗ ತಪಾಸಣೆಯನ್ನು ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಆರೋಗ್ಯವಂತರಾಗಿ ಇರಬೇಕೆಂದು ಸಲಹೆ ನೀಡಿದರು. ಭಾರತೀಯ ಸೇವಾ ದಳ ಅಧ್ಯಕ್ಷ ರುದ್ರ ಮೂರ್ತಿ, ಶಿವರತ್ನಮ್ಮ, ಮೀನಾಕ್ಷಿ, ನಾಗಪ್ಪ, ಶಿವಣ್ಣ, ಅಭಿ , ಸುರೇಶ್, ಮಲ್ಲಮ್ಮ, ಮರಿಯಪ್ಪ , ಕಾಂಗ್ರೆಸ್ ಮುಖಂಡರಾದ ಪಾಪಣ್ಣ, ಜಯಣ್ಣ, ಪುಟ್ಟಸ್ವಾಮಯ್ಯ, ಮತ್ತಿತರರು ಉಪಸ್ಥಿತರಿದ್ದರು.