ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರ ಸಾಮಾಜಿಕ ಭದ್ರತೆಗೆ ಹಗಲಿರುಳು ದುಡಿದವರು ಹೆಚ್. ಕೆ.ಆರ್.

ದಾವಣಗೆರೆ.ಮೇ.೮: ರಾಜ್ಯಾದ್ಯಂತ ವಿವಿಧ ಯೋಜನೆಗಳ ಅಡಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ, ಮೂಲಭೂತ ಸೌಲಭ್ಯ, ಸಾಮಾಜಿಕ ಭದ್ರತೆಗಾಗಿ ಹಗಲಿರುಳು ದುಡಿದ ಮಹಾನ್ ವ್ಯಕ್ತಿ  ಎಚ್ ಕೆ ರಾಮಚಂದ್ರಪ್ಪ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ ತಿಳಿಸಿದರು.ನಗರದ ಜಯದೇವ ವೃತ್ತದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರ ಕಚೇರಿಯಲ್ಲಿ ಹೆಚ್. ಕೆ.ರಾಮಚಂದ್ರಪ್ಪ ಅವರ ಎರಡನೇ ವರ್ಷದ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ‌ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಈಡೇರಿಗಾಗಿ ರಾಜ್ಯಮಟ್ಟದಲ್ಲಿ ಸಂಘವನ್ನು ಕಟ್ಟಿದ ಎಚ್ ಕೆ ರಾಮಚಂದ್ರಪ್ಪ ಅವರು ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮ ಮಟ್ಟದಲ್ಲೂ ಅಂಗನವಾಡಿ ಕಾರ್ಯಕರ್ತರಿಗೆ ಸೌಲಭ್ಯಗಳನ್ನು ಸಿಗುವಂತೆ ಮಾಡಿದರು. 1980ರಲ್ಲಿ ಸಂಘವನ್ನು ಕಟ್ಟಿದ ಅವರು ರಾಜ್ಯಾದ್ಯಂತ ಓಡಾಡಿ ಸಂಘವನ್ನು ಕಟ್ಟಿದರು ಎಂದರು.ಕೇವಲ ರೂ.100 ಮಾಸಾಶನ ಪಡೆಯುತ್ತಿದ್ದ ನಾವುಗಳು ಇಂದು 12,500 ವೇತನ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅಲ್ಲದೆ ಇತರೆ ಸೌಲತ್ತುಗಳು ನಮಗೆ ಸಿಗುತ್ತವೆ ಅದಕ್ಕೆಲ್ಲ ಕಾರಣ ಹೆಚ್ ಕೆಆರ್ ಎಂದರೆ ತಪ್ಪಲ್ಲ ಎಂದು ಹೇಳಿದರು.ಹೆಚ್ ಕೆಆರ್ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ನಾವು ಚಳುವಳಿ ಮತ್ತು ಹೋರಾಟಗಳನ್ನು ರೂಪಿಸುತಿದ್ದೇವೆ. ಆ ಮೂಲಕ ಸರ್ಕಾರದಿಂದ ಸೌಲತ್ತುಗಳನ್ನು ಪಡೆಯುತ್ತಿದ್ದೇವೆ. ಇದಕ್ಕೆಲ್ಲದಕ್ಕೂ ಮೂಲ ಕಾರಣ ರಾಮಚಂದ್ರಪ್ಪ ಅವರೇ, ಅವರು ಮತ್ತೊಮ್ಮೆ ಈ ಹುಟ್ಟಿ ಬರಲಿ ಎಂದು ಹಾರೈಸಿದರು.ಅಂಗನವಾಡಿ ಕಾರ್ಯಕರ್ತೆಯ ರಾಜ್ಯ ಸಂಚಾಲಕ ಆವರಗೆರೆ ವಾಸು ಮಾತನಾಡಿ, ಶೋಷಿತ ವರ್ಗ, ಕಾರ್ಮಿಕ ವರ್ಗ, ದುಡಿಯುವ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಹಗಲಿರುಳು ದುಡಿಯುವ ಮೂಲಕ ತಮ್ಮನ್ನು  ತೊಡಗಿಸಿಕೊಂಡು ಹೋರಾಡಿದ ಮಹಾನ್ ವ್ಯಕ್ತಿ ರಾಮಚಂದ್ರಪ್ಪ. ಅವರ ತತ್ವ ಮತ್ತು ಆದರ್ಶಗಳ ಆಧಾರದಲ್ಲಿ ನಮ್ಮ ಹೋರಾಟಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಖಜಾಂಚಿ ವಿಶಾಲಾಕ್ಷಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯ ಸಮಸ್ಯೆಗಳ ಕುರಿತಂತೆ ಅವರಿಗೆ ಬೇಕಾದ ಮೂಲಭೂತ ಸೌಲಭ್ಯಗಳು ಮತ್ತು ವಿವಿಧ ಭದ್ರತೆಗಳ ಕುರಿತಂತೆ ಅವರು ಹೋರಾಟ ನಡೆಸಿದರು. ಅಂತಯೇ ನಾವು ಅದರ ಫಲವನ್ನು ಅನುಭವಿಸುತ್ತಿದ್ದೇವೆ. ಅವರ ಕನಸು ಈಡೇರಿದೆ ಎಂದು ಸ್ಮರಿಸಿದರು.ಈ ವೇಳೆ ಅಂಗನವಾಡಿ ಕಾರ್ಯಕರ್ತರು ಇದ್ದರು.