
ಬೀದರ್: ಎ.13:ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸುವಲ್ಲಿ ಹುಮನಾಬಾದ್ ಕಾರ್ಮಿಕ ನಿರೀಕ್ಷಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘ ಆರೋಪಿಸಿದೆ.
ಸಂಘದ ಪದಾಧಿಕಾರಿಗಳು ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಅವರ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಕಟ್ಟಡ ಕಾರ್ಮಿಕರು ಮದುವೆ, ಹೆರಿಗೆ, ಅಂತ್ಯ ಸಂಸ್ಕಾರ, ಶಿಕ್ಷಣ ಸೇರಿ ವಿವಿಧ ಧನ ಸಹಾಯಕ್ಕಾಗಿ ತಂತ್ರಾಂಶದಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಮಿಕ ನಿರೀಕ್ಷಕರು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇವರಿಂದಾಗಿ ಕಾರ್ಮಿಕರು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಕಾರ್ಮಿಕ ನಿರೀಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕೆ. ಶಿಂಧೆ, ಪ್ರಮುಖರಾದ ಅಶೋಕ ವಗ್ಗೆ, ಸುರೇಶ ಚಾಂಬೋಳಕರ್, ಗೌತಮ ಮುತ್ತಂಗಿಕರ್, ಗುಂಡಪ್ಪ ದಂಡೆ, ಹರೀಶ್ ಖಂಡೆ, ಶ್ರೀಕಾಂತ ಇಮ್ಲಿಕರ್ ಇದ್ದರು.