ಕಾರ್ಮಿಕರಿಗೆ ಸೌಲಭ್ಯ: ಅರ್ಜಿ ವಿಲೇವಾರಿಗೆ ಒತ್ತಾಯ

ಬೀದರ್: ಜೂ.9:ವಿವಿಧ ಸೌಲಭ್ಯ ಕೋರಿ ನೋಂದಾಯಿತ ಕಟ್ಟಡ ಕಾರ್ಮಿಕರು ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಬೀದರ್ ಜಿಲ್ಲೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಒಕ್ಕೂಟ ಸಂಘ ಒತ್ತಾಯಿಸಿದೆ.

ಸಂಘದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಸಕಾಲದಲ್ಲಿ ಸಲ್ಲಿಸಲಾದ ಅರ್ಜಿಗಳು ಒಂದು ವರ್ಷವಾದರೂ ವಿಲೇವಾರಿಯಾಗಿಲ್ಲ ಎಂದು ದೂರಿದರು.

ಕಾರ್ಮಿಕರ ಗುರುತಿನ ಚೀಟಿ ಆನ್‍ಲೈನ್ ನೋಂದಣಿ ರದ್ದುಪಡಿಸಿ, ಇಲಾಖೆ ಕಚೇರಿಯಲ್ಲೇ ನೋಂದಣಿ ಮಾಡಬೇಕು. ನೋಂದಾಯಿತ ಎಲ್ಲ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಕೊಡಬೇಕು. ಕಾರ್ಮಿಕ ಇಲಾಖೆ ಹುದ್ದೆಗಳಿಗೆ ಕಾಯಂ ನೌಕರರನ್ನು ನೇಮಕ ಮಾಡಬೇಕು. ಮದುವೆ ಸಹಾಯ ಧನ ರೂ. 1 ಲಕ್ಷಕ್ಕೆ ಏರಿಸಬೇಕು. ಸಹಜ ಮರಣ ಹೊಂದಿದವರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರ ಕೊಡಬೇಕು. ಹೆರಿಗೆ ಸಹಾಯ ಧನ ಠೇವಣಿ ರದ್ದುಪಡಿಸಿ, ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಜಿಲ್ಲಾಮಟ್ಟದಲ್ಲಿ ಕಾರ್ಮಿಕ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಪಂಢರಿ ಪೂಜಾರಿ, ಅಧ್ಯಕ್ಷ ಸೂರ್ಯಕಾಂತ ಸಾಧುರೆ, ಉಪಾಧ್ಯಕ್ಷ ಯೇಸುದಾಸ ಬೆಳ್ಳೂರ, ಪ್ರಧಾನ ಕಾರ್ಯಧರ್ಶಿ ತುಕಾರಾಮ ಗೌರೆ, ಕಾರ್ಯದರ್ಶಿ ಅಶೋಕ ವಗ್ಗೆ, ಕೋಶಾಧ್ಯಕ್ಷ ಅನಿಲಕುಮಾರ ಗಂಜಕರ್, ಸಂಘಟನಾ ಸಂಚಾಲಕ ರಾಜಕುಮಾರ ಕಾಂಬಳೆ, ಹಿರಿಯ ಸಲಹೆಗಾರ ಶಿವರಾಜ ಜಮಿಸ್ತಾನಪುರ, ಸದಸ್ಯರಾದ ಸಂತೋಷ ಕೆ. ಸಿಂದೆ, ಪ್ರಕಾಶ ಚಿಕ್ಕಪೇಟಕರ್, ಧನರಾಜ ದೊಡ್ಡೆ, ಬಾಬು, ರಾಜಕುಮಾರ ಧನ್ನೂರ ಇದ್ದರು.