ಕಾರ್ಮಿಕರಿಗೆ ಸಕಾಲ ಕಾಯ್ದೆಯ ಬಗ್ಗೆ ಅರಿವು

ಕೋಲಾರ,ಡಿ,೩:ಸಕಾಲ ಅಂದರೆ ಸರ್ಕಾರಿ ಸೇವೆಯನ್ನು ಕಾಲ ಮಿತಿಯೊಳಗೆ ಸಾರ್ವಜನಿಕರಿಗೆ ಒದಗಿಸೋ ಯೋಜನೆಯಾಗಿದ್ದು, ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಸಕಾಲ ಸೇವೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋಲಾರ ಕಾರ್ಮಿಕ ನಿರೀಕ್ಷಕಿ ಶ್ರೀಮತಿ ರಾಜೇಶ್ವರಿ ಕರೆ ನೀಡಿದರು.
ಕೋಲಾರ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಸೆಂಟ್ರಿಂಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘದ ಸಹಯೋಗದೊಂದಿಗೆ ನಗರದ ಗೌರಿಪೇಟೆಯಲ್ಲಿರುವ ಸಂಘದ ಕಛೇರಿಯಲ್ಲಿ “ಸಕಾಲ ಕಾಯ್ದೆಯ ಬಗ್ಗೆ ಅರಿವು” ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಅವರು ಮಾತನಾಡಿದರು. ಮುಖ್ಯವಾದ ಇಲಾಖೆಗಳಾದ ಕಂದಾಯ, ಶಿಕ್ಷಣ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರ್ಥಿಕ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಸಾರಿಗೆ, ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಸೇವೆಗಳು ಈ ಕಾಯ್ದೆ ಅಡಿಯಲ್ಲಿ ಜಾರಿಗೆ ತರಲಾಗಿದೆ ಎಂದರು.
ಯಾವುದೇ ಇಲಾಖೆಗೆ ಸಂಬಂಧಿಸಿದಂತ ಸೇವೆ ಪಡೆಯಲು ನಾಗರೀಕರು ನಿರ್ಧಿಷ್ಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸ್ವೀಕೃತಿಯ ಬಗ್ಗೆ ೧೫ ಅಂಕಿಗಳ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಈ ಸಂಖ್ಯೆ ಇಟ್ಟುಕೊಂಡು ಸುಲಭವಾಗಿ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿ, ಹಾಗೂ ಜಿಲ್ಲಾ ಸೆಂಟ್ರಿಂಗ್ ಮತ್ತು ಇತರೆ ಕಟ್ಟದ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಬಾಲಯ್ಯ, ಪದಾಧಿಕಾರಿಗಳಾದ ಕೃಷ್ಣಪ್ಪ, ರಖೀಬ್, ಚಲಪತಿ, ಗೋಪಾಲ್, ಮುರಳಿ ಮೋಹನ್, ಗಂಗರಾಜ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.