ಕಾರ್ಮಿಕರಿಗೆ ಲಾಕ್‌ಡೌನ್ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ

ತುಮಕೂರು, ಸೆ. ೨೫- ಕಾರ್ಮಿಕರಿಗೆ ಲಾಕ್‌ಡೌನ್ ಪರಿಹಾರ ನೀಡಬೇಕು, ಸಾಮಾಜಿಕ ಭದ್ರತೆ ಒದಗಿಸಿ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮನೆ ಕೆಲಸಗಾರರ ಸಂಘ, ಟೈಲರ್‌ಗಳ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಲಾಕ್‌ಡೌನ್ ಪರಿಹಾರವಾಗಿ ಎಲ್ಲ ಸಂಘಟಿತ ಕಾರ್ಮಿಕರಿಗೆ ೭,೫೦೦ ರೂ. ನೀಡಬೇಕು, ಲಾಕ್‌ಡೌನ್ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ಮನೆ ಕೆಲಸಗಾರರು, ಹಮಾಲಿ ಕಾರ್ಮಿಕರು, ಹೊಲಿಗೆ, ಮೆಕ್ಯಾನಿಕ್, ಆಟೋ, ಬಸ್, ಲಾರಿ, ಟೆಂಪೋ ಚಾಲಕರು, ದೋಬಿಗಳು, ಕ್ಷೌರಿಕರು, ಕುಂಬಾರರು, ಪುರಿಬಟ್ಟಿ ಕಾರ್ಮಿಕರು, ಚಿನ್ನ-ಬೆಳ್ಳಿ ಕೆಲಸಗಾರರು ಸೇರಿದಂತೆ ಇತರೆ ಅಸಂಘಟಿತ ಕಾರ್ಮಿಕರಿಗೆ ಕೂಡಲೇ ಆರ್ಥಿಕ ನೆರವು ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುಮಾರು ೫೫,೫೦೦ ಅರ್ಜಿ ಸಲ್ಲಿಕೆಯಾಗಿದ್ದು, ೭-೮ ಸಾವಿರ ಕಾರ್ಮಿಕರಿಗೆ ಲಾಕ್‌ಡೌನ್ ಪರಿಹಾರ ದೊರೆತಿದೆ. ಉಳಿದವರಿ ಇನ್ನೂ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಆರ್ಥಿಕ ಮಂಜೂರಾತಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಾದ ಪಿಂಚಣಿ, ಮಕ್ಕಳಿಗೆ ವಿದ್ಯಾರ್ಥಿವೇತನ, ಚಿಕಿತ್ಸಾ ವೆಚ್ಚ, ಮರುಪಾವತಿ, ಮಕ್ಕಳ ಮದುವೆಗೆ ಸಹಾಯ ಧನ ಯೋಜನೆಗಳನ್ನುರೂಪಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಕಾರ್ಮಿಕ ಅಧಿಕಾರಿ ರಮೇಶ್ ಮಾತನಾಡಿ, ಎಲ್ಲ ಅರ್ಹ ಅರ್ಜಿದಾರರಿಗೆ ೨ ಸಾವಿರ ರೂ. ಆರ್ಥಿಕ ನೆರವು ದೊರೆಯಲಿದೆ. ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆ ಬಗ್ಗೆ ಸ ರ್ಕಾರ ಗಮನಹರಿಸಲಿದೆ ಎಂದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಸೈಯದ್ ಮುಜೀದ್, ಎನ್.ಕೆ. ಸುಬ್ರಹ್ಮಣ್ಯ, ಮನೆ ಕೆಲಸಗಾರರ ಸಂಘದ ಅನುಸೂಯ, ಟೈಲರ್‌ಗಳಸಂಘದ ಮಂಜುಳಾ, ಆಟೋ ಚಾಲಕರ ಸಂಘದ ಸಿದ್ಧರಾಜು, ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜಶೇಖರ್, ಕಟ್ಟಡ ಕಾರ್ಮಿಕರ ಸಂಘದ ಖಲೀಲ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.