ಕಾರ್ಮಿಕರಿಗೆ ರಜೆ ನೀಡದ್ದನ್ನು ವಿರೋಧಿಸಿ ಪ್ರತಿಭಟನೆ

ಮಾಲೂರು, ನ.೩:ತಾಲೂಕಿನ ಮಾರಸಂದ್ರ ಗ್ರಾಮದ ಕೈಗಾರಿಕಾ ಪ್ರಾಂಗಣದಲ್ಲಿರುವ ಅಲ್‌ಕಾರ್ಗೊ ಸಂಸ್ಥೆಗೆ ಸೇರಿರುವ ಪ್ರಾಗಂಣದಲ್ಲಿರುವ ಪ್ಲಿಪ್‌ಕಾರ್ಟ್ ಕಾರ್ಖಾನೆಯಲ್ಲಿ ನ.೧ ರಂದು ಕನ್ನಡ ರಾಜ್ಯೋತ್ಸವ ದಿನದಂದು ಸರಕಾರಿ ರಜೆ ಇದ್ದರೂ ಸಹ ಕಾರ್ಮಿಕರಿಗೆ ರಜೆ ನೀಡದೆ ದುಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ತಾ.ಕರವೆ ಪದಾಧಿಕಾರಿಗಳು ಕಾರ್ಖಾನೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಾರಸಂದ್ರ ಗ್ರಾಮದ ಸಮೀಪ ಇರುವ ಅಲ್‌ಕಾರ್ಗೊ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಲಿಪ್‌ಕಾರ್ಟ್ ಕಾರ್ಖಾನೆಯಲ್ಲಿ ನ.೧ ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಸರಕಾರ ರಜೆಯನ್ನು ಘೋಷಣೆ ಮಾಡಿದೆ. ಕೈಗಾರಿಕಾ ಪ್ರಾಂಗಣದಲ್ಲಿರುವ ಎಲ್ಲಾ ಕಾರ್ಖಾನೆಗಳು ರಜೆಯನ್ನು ಘೋಷಣೆ ಮಾಡಿ ಕಾರ್ಮಿಕರಿಗೆ ರಜೆಯನ್ನು ನೀಡಿದೆ. ಆದರೆ, ಪ್ಲಿಪ್‌ಕಾರ್ಟ್ ಕಂಪನಿಯು ಕಾರ್ಮಿಕರಿಗೆ ರಜೆಯನ್ನು ಘೋಷಿಸದೆ ಎಂದಿನಂತೆ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿರುವ ಬಗ್ಗೆ ಬಂದಂತಹ ಮಾಹಿತಿಯ ಮೇರೆಗೆ ಕರವೇ(ಟಿ.ಎ.ನಾರಾಯಣಗೌಡ ಬಣ) ಪದಾಧಿಕಾರಿಗಳು ಕಾರ್ಖಾನೆಯ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ರಾಜ್ಯಾದ್ಯಾಂತ ನ.೧ ರಂದು ತಾಯಿ ಭುವನೇಶ್ವರಿಯ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಮೂಲಕ ಕನ್ನಡ ಪ್ರೇಮವನ್ನು ಮೂಡಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸರಕಾರ ರಜೆಯನ್ನು ಘೋಷಣೆ ಮಾಡಿದೆ. ಆದರೆ ಪ್ಲಿಪ್‌ಕಾರ್ಟ್‌ನ ವ್ಯವಸ್ಥಾಪಕರ ನಿರ್ಲಕ್ಷದಿಂದ ಕಾರ್ಖಾನೆಯಲ್ಲಿ ೧ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೈಗಾರಿಕಾ ಪ್ರಾಂಗಣದಲ್ಲಿರುವ ಎಲ್ಲಾ ಕಾರ್ಖಾನೆಗಳಿಗೆ ರಜೆ ನೀಡಲಾಗಿದೆ. ಆದರೆ, ಪ್ಲಿಪ್‌ಕಾರ್ಟ್ ಕಾರ್ಖಾನೆಯವರು ಮಾತ್ರ ಕಾರ್ಮಿಕರಿಗೆ ರಜೆ ನೀಡದೆ ದುಡಿಸಿಕೊಳ್ಳುತ್ತಿರುವುದು ನಾಡಿಗೆ ದ್ರೋಹ ಮಾಡಿದಂತಾಗಿದೆ. ರಾಜ್ಯೋತ್ಸವ ದಿನದಂದು ರಜೆ ನೀಡದ ವ್ಯವಸ್ಥಾಪಕರ ನಿರ್ಲಕ್ಷವನ್ನು ಖಂಡಿಸಿ ಕಾರ್ಖಾನೆಯ ಮುಂಭಾಗದಲ್ಲಿ ಸುಮಾರು ೨ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಜಿಪಂ ಸದಸ್ಯ ಚಿನ್ನಸ್ವಾಮಿಗೌಡ, ಗ್ರಾಪಂ ಸದಸ್ಯ ತೇಜಸ್‌ಗೌಡ, ಚಿಕ್ಕಾಪುರ ನಾರಾಯಣಸ್ವಾಮಿ, ಹರೀಶ್, ಎಎಸ್‌ಐಗಳಾದ ಸೋಮಶೇಖರ್, ಲಕ್ಕೂರು ಠಾಣೆಯ ನಾಗಭೂಷಣ್ ಆಗಮಿಸಿ ಕಾರ್ಖಾನೆಯ ವ್ಯವಸ್ಥಾಪಕ ಕಿರಣ್‌ಕುಮಾರ್ ಅವರನ್ನು ಕರೆಯಿಸಿ ಚರ್ಚಿಸಿದರು. ನಂತರ ಕರವೇ ಕಾರ್ಯಕರ್ತರು ಕಾರ್ಮಿಕರಿಗೆ ರಜೆ ನೀಡಬೇಕು. ಕಾರ್ಖಾನೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಪಂದಿಸಿದ ವ್ಯವಸ್ಥಾಪಕ ಕಿರಣ್‌ಕುಮಾರ್, ಕಾರ್ಖಾನೆಯಲ್ಲಿ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಕಾರ್ಮಿಕರಿಗೆ ಪೂರ್ತಿ ದಿನ ರಜೆಯನ್ನು ನೀಡಲಾಗುವುದು. ನೂತನವಾಗಿ ಕಾರ್ಖಾನೆ ಆರಂಭವಾಗಿರುವುದರಿಂದ ನಮಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ರಜೆ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು ಎಂದು ಕ್ಷಮೆಯಾಚನೆ ಮಾಡಿದ ಹಿನ್ನಲೆಯಲ್ಲಿ ಕರವೇ ಪದಾಧಿಕಾರಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜ್, ತಾಲೂಕು ಪ್ರಧಾನ ಸಂಚಾಲಕ ಕೆ.ಎನ್.ಜಗದೀಶ್, ತಾ.ಉಪಾಧ್ಯಕ್ಷ ದ್ಯಾಪಸಂದ್ರ ಅಮರ್ ಇತರರು ಹಾಜರಿದ್ದರು.