ಕಾರ್ಮಿಕರಿಗೆ ಕೋವಿಡ್ ಲಸಿಕೆ

ಬಾಗಲಕೋಟೆ, ಜೂ7 : ಶಾಸಕರು ಮತ್ತು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ನಿರ್ದೇಶನದನ್ವಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾರ್ಯದಲ್ಲಿ ತೊಡಗಿಸಿಕೊಂಡ ಎಂಜಲ್ ಕನ್‍ಸ್ಟ್ರಕ್ಶನ್‍ದ 200 ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಬಿ.ವಿ.ವಿ.ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ) ಕೋವಿಡ್ ಲಸಿಕೆಯ ಈ ಅಭಿಯಾನಕ್ಕೆ ಚಾಲನೆ ನೀಡಿ ‘ಕಾರ್ಮಿಕರಿಗೂ ಕೋವಿಡ್ ಲಸಿಕೆ ನೀಡುವುದು ಈ ಸಂದರ್ಭದ ಅಗತ್ಯವಾಗಿದೆ. ಕೊರೊನಾ ಮುಕ್ತ ಸಮಾಜದ ನಿರ್ಮಾಣದ ಈ ಲಸಿಕಾ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಶಾಸಕರು ಮತ್ತು ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಎಲ್ಲರೂ ಜೊತೆಯಾಗಿ ಹೆಜ್ಜೆ ಹಾಕೋಣ. ಈ ಸಂದರ್ಭ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಕಾರವನ್ನು ಶ್ಲಾಘಿಸುತ್ತೇನೆ’ ಎಂದು ನುಡಿದರು. ಈ ಲಸಿಕಾ ಕಾರ್ಯಕ್ರಮವನ್ನು ಕುಮಾರೇಶ್ವರ ಆಸ್ಪತ್ರೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಎಂಜಲ್ ಕನ್‍ಸ್ಟ್ರಕ್ಶನ್‍ನ ಮಾಲೀಕರಾದ ಜಾನ್ ಫ್ರಾನ್ಸಿಸ್ ಮತ್ತು ಜಾನ್ ಸ್ಟೀಫನ್, ಯುವ ಧುರೀಣ ಅನಿಲ ಅಕ್ಕಿಮರಡಿ, ಆರೋಗ್ಯ ಇಲಾಖೆಯ ಡಾ.ರಾಹುಲ ಜೋಶಿ ಉಪಸ್ಥಿತರಿದ್ದರು.