ಕಾರ್ಮಿಕರಿಗೆ ಕೋವಿಡ್ ಲಸಿಕೆ, ಕಾರ್ಮಿಕ ಸಂಘ-ಸಂಸ್ಥೆಗಳು ಕಾರ್ಮಿಕರನ್ನು ಮನವೊಲಿಸಬೇಕು

ಕಲಬುರಗಿ,ಜೂ. 2:ಕೋವಿಡ್ ಮಹಾಮಾರಿ ರೋಗದಿಂದ ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆ‌ ನೀಡಲು ಆದ್ಯತಾ ವಲಯದಲ್ಲಿ ಗುರುತಿಸಲಾಗಿರುವ ಕಟ್ಟಡ ಕಾರ್ಮಿಕರು ಕೋವಿಡ್ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಈ ಕುರಿತು ಕಟ್ಟಡ ಕಾರ್ಮಿಕರಲ್ಲಿ ಅರಿವು ಮೂಡಿಸಿ ಲಸಿಕೆ ಪಡೆಯುವಂತೆ ಮನವೋಲಿಸಬೇಕೆಂದು ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ಅವರು ಹೇಳಿದರು.

ಮಂಗಳವಾರ ತಮ್ಮ ಕಚೇರಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡುವ ಹಾಗೂ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ ಕೋವಿಡ್ ಲಾಕ್‌ ಡೌನ್ ಆರ್ಥಿಕ ಪ್ಯಾಕೇಜ್ ವಿತರಣೆ ಕುರಿತು ಕಾರ್ಮಿಕ ಸಂಘಗಳು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಕೋವಿಡ್ ಎರಡನೇ ಅಲೆಯ ಲಾಕ್‍ ಡೌನ್ ಪ್ರಯುಕ್ತ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಕ್ರಮವಾಗಿ 3000 ರೂ. ಮತ್ತು 2000 ರೂ.ಗಳ ಪರಿಹಾರ ಘೋಷಿಸಿದ್ದು, ಈ ಪರಿಹಾರ ಪಡೆಯಲು ಅನುಸರಿಸಬೇಕಾದ ವಿಧಾನ ಕುರಿತು ಕಾರ್ಮಿಕರಿಗೆ ತಿಳಿಹೇಳಬೇಕೆಂದು ಸಭೆಯಲ್ಲಿ ಸಂಘ-ಸಂಸ್ಥೆಗಳಿಗೆ ಸೂಚಿಸಲಾಯಿತು.

ಈಗಾಗಲೇ ನೋಂದಣಿಯಾಗಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಲಾಕ್ ಡೌನ್ ಪರಿಹಾರಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕಳೆದ ಬಾರಿಯಂತೆ ಅವರ ಖಾತೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಡಿಬಿಟಿ ಮೂಲಕ ನೇರವಾಗಿ ಪರಿಹಾರ ಜಮೆ ಮಾಡಲಾಗುತ್ತದೆ. ನೊಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಡಬೇಕು. ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಿಕೊಳ್ಳಬೇಕೆಂದರು.

ಅಸಂಘಟಿತ ಕಾರ್ಮಿಕರಲ್ಲಿ ಕಳೆದ ವರ್ಷ ಲಾಕ್ ಡೌನ್ ಪರಿಹಾರ ಪಡೆದ ಅಗಸರು ಮತ್ತು ಕ್ಷೌರಿಕರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಜಮೆ ಮಾಡಲಾಗುತ್ತದೆ. ಇವರು ಸಹ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಉಳಿದಂತೆ ಟೈಲರ್ ಗಳು, ಹಮಾಲರು, ಕುಂಬಾರರು, ಕಮ್ಮಾರರು, ಭಟ್ಟಿ ಕಾರ್ಮಿಕರು, ಮನೆ ಕೆಲಸದವರು, ಮೆಕ್ಯಾನಿಕ್, ಅಕ್ಕಸಾಲಿಗರು ಹಾಗೂ ಚಿಂದಿ ಆಯುವವರು ಪರಿಹಾರಕ್ಕಾಗಿ ಸೇವಾ ಸಿಂಧುವಿನಲ್ಲಿ 2021ರ ಜೂನ್ 5 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅರ್ಜಿ ಸಲ್ಲಿಸಲು ಬಯಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಹಾಗೂ ಉದ್ಯೋಗ ಪ್ರಮಾಣ ಪತ್ರಗಳನ್ನು ಅಪ್‍ಲೋಡ್ ಮಾಡಬೇಕಾಗುತ್ತದೆ.

ನೋಂದಣಿಗೆ ಈಗಲೂ ಅವಕಾಶ:

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕಾರ್ಮಿಕ‌ ಕಲ್ಯಾಣ ಮಂಡಳಿಯಲ್ಲಿ ಮತ್ತು ಅಸಂಘಟಿತ ಕಾರ್ಮಿಕರು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಅಡಿಯಲ್ಲಿ ಲೌಕ್‍ ಡೌನ್ ಅವಧಿವರೆಗೂ ಹೊಸದಾಗಿ ತಮ್ಮ ಹೆಸರನ್ನು ಸೇವಾ‌ ಸಿಂಧು ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ಹೀಗೆ ಹೊಸದಾಗಿ ಹೆಸರು ನೊಂದಾಯಿಸಿಕೊಂಡ ಅಸಂಘಟಿತ ಕಾರ್ಮಿಕರ ಪೈಕಿ ಅಗಸರು ಮತ್ತು ಕ್ಷೌರಿಕರನ್ನು ಹೊರತುಪಡಿಸಿ ಉಳಿದ ಕಾರ್ಮಿಕರು ಲಾಕ್ ಡೌನ್ ಪರಿಹಾರಕ್ಕೆ ಪ್ರತ್ಯೇಕವಾಗಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ‌ ಎಂದು ಉಪ ಕಾರ್ಮಿಕ ಆಯುಕ್ತ ಡಿ.ಜೆ.ನಾಗೇಶ್ ತಿಳಿಸಿದರು.

ಪರಿಹಾರಕ್ಕೆ‌ ಮಧ್ಯವರ್ತಿಗಳ ಮೊರೆ ಹೋಗದಿರಿ;

ಕಾರ್ಮಿಕರು ಪರಿಹಾರಕ್ಕಾಗಿ ಯಾವುದೇ ಸಂಘ-ಸಂಸ್ಥೆ, ಮಧ್ಯವರ್ತಿಗಳ ಮೊರೆ ಹೋಗಬಾರದು ಹಾಗೂ ಮೊದಲಾದವರಿಗೆ ಯಾವುದೇ ದಾಖಲೆ ಮತ್ತು ಹಣ ನೀಡಬಾರದು ಎಂದು ಉಪ ಕಾರ್ಮಿಕ ಆಯುಕ್ತರು ಕಾರ್ಮಿಕ ಬಂಧುಗಳಲ್ಲಿ‌ ಮನವಿ‌ ಮಾಡಿದ್ದಾರೆ

ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ಆರತಿ, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.