ಕಾರ್ಮಿಕರಿಗೆ, ಕೃಷಿಕರಿಗೆ ಕಾನೂನು ರೀತಿಯ ಅವಕಾಶ: ಎಸ್.ಅಂಗಾರ

ಸುಳ್ಯ , ಎ.೨೯- ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಅದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ೧೪ ದಿನಗಳ ಕಾಲ ರಾಜ್ಯ ಲಾಕ್ ಡೌನ್ ಆಗಿದ್ದು, ಸುಳ್ಯದಲ್ಲಿ ಆರೋಗ್ಯ ವ್ಯವಸ್ಥೆ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಚಿವರ ನೇತೃತ್ವದಲ್ಲಿ ತಹಶೀಲ್ದಾರ್, ಪೋಲೀಸ್ ಮತ್ತು ಆರೋಗ್ಯ ಇಲಾಖೆಯವರಿದ್ದು ಸಭೆಯು ಬುಧವಾರ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.
ಆರೋಗ್ಯಕ್ಕೆ ಕುರಿತಂತೆ ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್ ಹಾಗೂ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಕರುಣಾಕರ ಕೆ.ವಿ.ಯವರನ್ನು ವಿಚಾರಿಸಿದರು. ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ. ಆಕ್ಸಿಜನ್ ೧೨ ದಿನಕ್ಕೆ ಬೇಕಾದಷ್ಟು ಸ್ಟಾಕ್ ಇದೆ ಎಂದು ಅಧಿಕಾರಿಗಳು ತಿಳಿಸಿದಾಗ, ಸಮಸ್ಯೆಯಾದರೆ ನನಗೆ ತಿಳಿಸಿ ವ್ಯವಸ್ಥೆ ಕಲ್ಪಿಸಲಾಗುವುದು. ಆದರೆ ಯಾರಿಗೂ ಚಿಕಿತ್ಸೆ ಸಿಗಲಿಲ್ಲ ಎಂಬ ಮಾತು ಬರಬಾರದು. ಮತ್ತು ಕೊರೊನಾ ಪ್ರಕರಣ ಇದ್ದರೆ ಸುಳ್ಯದಲ್ಲೇ ಚಿಕಿತ್ಸೆ ಕೊಡಿ. ಒಂದು ವೇಳೆ ಅಗತ್ಯ ಬಿದ್ದರೆ ಮಾತ್ರ ರೆಫರ್ ಮಾಡಿ ಎಂದು ಸಚಿವರು ಸೂಚನೆ ನೀಡಿದರು. ಕೊರೊನಾ ಪ್ರಕರಣದ ಕುರಿತು ಪ್ರತೀ ದಿನ ವರದಿ ಮಾಡುವಂತೆಯೂ ಸಚಿವರು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಕಾರ್ಮಿಕರಿಗೆ, ಕೃಷಿಕರಿಗೆ ಅವಕಾಶ:
ಸರಕಾರದ ಸುತ್ತೋಲೆಯಂತೆ ಕಾರ್ಮಿಕರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಯಿಂದ ಕೆಲಸಕ್ಕೆ ಹೋಗುವುದಿದ್ದರೆ ಅವರಿಗೆ ತೊಂದರೆ ಕೊಡಬೇಡಿ. ಕೊಕ್ಕೊ ಇನ್ನಿತರ ಕೃಷಿ ಬೆಳೆ ಮಾರಾಟಕ್ಕೆ ಕೃಷಿಕರು ಬಂದಾಗ ಅವರಿಗೂ ಅವಕಾಶ ನೀಡಿ ಎಂದು ಸಭೆಯಲ್ಲಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ನವೀಚಂದ್ರ ಜೋಗಿ ಹಾಗೂ ಎಸ್.ಐ. ಹರೀಶ್ ಎಂ.ಆರ್. ರಿಗೂ ಸೂಚನೆ ನೀಡಿದರು. ಕಳೆದ ಬಾರಿ ನಾವು ಯಾರಿಗೂ ತೊಂದರೆ ನೀಡಿಲ್ಲ. ವಿಚಾರಿಸುತ್ತೇವೆ. ಅವರ ಮಾತಿನಲ್ಲಿ ವಿಶ್ವಾಸ ಬಂದರೆ ನಾವು ಕಳುಹಿಸುತ್ತೇವೆ. ಕೆಲವರು ಪೇಟೆ ನೋಡಲೆಂದೇ ಬರುವವರು ಇರುತ್ತಾರೆ” ಎಂದು ಎಸ್.ಐ. ಹೇಳಿದಾಗ, ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಸುಮ್ಮನೆ ಪೇಟೆ ತಿರುಗಲು ಬರುವುದಾದರೆ ಲಾಕ್ ಡೌನ್ ಯಾಕೆ ಬೇಕು” ಎಂದು ಸಚಿವರು ಹೇಳಿದರು.
“ಕಾರ್ಮಿಕರು, ಕೃಷಿಕರಲ್ಲಿ ಐ.ಡಿ. ಕಾರ್ಡ್ ಇರುತ್ತದೆ” ಅದನ್ನು ತೋರಿಸಲಿ ಎಂದು ಎಸ್.ಐ. ಹೇಳಿದರು. ಅಗತ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೂ ಅವರ ಸಮಸ್ಯೆ ಗಂಭೀರವೆಂದು ಅರಿತರೆ ನಾವೇ ಬಿಡುತ್ತೇವೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕಂದಡ್ಕ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷ ವಿನಯ ಮುಳುಗಾಡು , ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಸುನಿಲ್ ಕೇರ್ಪಳ, ನ.ಪಂ. ಸದಸ್ಯ ಸುಧಾಕರ ಕುರುಂಜಿಭಾಗ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ
ಅಧ್ಯಕ್ಷ ಗುರುದತ್ ನಾಯಕ್, ಜಿನ್ನಪ್ಪ ಪೂಜಾರಿ, ಮಹೇಶ ರೈ ಮೇನಾಲ, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಇದ್ದರು.