ಕಾರ್ಮಿಕರಿಗೆ ಕಿರುಕುಳ ಬೇಡ:ಯಳಸಂಗಿ

ಕಲಬುರಗಿ:ಡಿ.08: ಎಸಿಸಿ ವಾಡಿ ಸಿಮೆಂಟ್ ಕಂಪೆನಿಯ ಆಡಳಿತ ಮಂಡಳಿಯ ಸ್ವಯಂನಿವೃತ್ತಿಗೆ ಕಾರ್ಮಿಕರ ಮೇಲೆ ತೀವ್ರ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ ಕಳೆದ ಗುರುವಾರ ಆಡಳಿತ ಮಂಡಳಿ ದಬ್ಬಾಳಿಕೆ ವಿರೋಧಿಸಿ ಪತ್ರ ಬರೆದು, ಆಡಿಯೋ ಮಾಡಿ, ಎಸಿಸಿ ವಾಡಿ ಸಿಮೆಂಟ್ ಕಂಪೆನಿಯ ಇಂಜಿನಿಯರ್ ರಮೇಶ್ ಪವಾರ್ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಅದಕ್ಕೆ ನೇರವಾಗಿ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಎಐಟಿಯುಸಿ ಜಿಲ್ಲಾ ಮಂಡಳಿ ಅಧ್ಯಕ್ಷ ಎಚ್.ಎಸ್. ಪತಕಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಭುದೇವ್ ಯಳಸಂಗಿ ಅವರು ಆರೋಪಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಆಡಳಿತ ಮಂಡಳಿಯವರದು ಅಮಾನವೀಯ ಕ್ರೂರ ವರ್ತನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ ಅವರು, ಕಾರ್ಮಿಕರ ಸಮಸ್ಯೆಗಳ ಕುರಿತು ಪ್ರತಿ 3 ತಿಂಗಳಿಗೊಮ್ಮೆ ಸಭೆ ಮಾಡುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಮತ್ತು ಅಲ್ಲಿಯ ಕಾರ್ಮಿಕ ಸಂಘಟನೆಯ ಚುನಾವಣೆ ನಡೆಸಲು ಅನುಮತಿ ಪತ್ರಕ್ಕಾಗಿ ನಾಲ್ಕೈದು ಬಾರಿ ಮನವಿ ಪತ್ರ ಕೊಟ್ಟರೂ ಸಹ ಇಲ್ಲಿಯವರೆಗೂ ಅವಕಾಶ ನೀಡಿರುವುದಿಲ್ಲ. ಇದನ್ನು ಪ್ರಶ್ನಿಸಿ ಕೂಡಲೇ ಸಂಘಟನೆಯ ಚುನಾವಣೆ ನಡೆಸಲು ನ್ಯಾಯಾಲಯದ ಮೊರೆ ಹೋಗಿದೆ ಎಂದು ತಿಳಿಸಿದ್ದಾರೆ.
ಕೆಳ ಹಂತ ನ್ಯಾಯಾಲಯ ಚುನಾವಣೆ ನಡೆಸುವಂತೆ ಆದೇಶಿಸಿದೆ. ಆದರೆ ಆಡಳಿತ ಮಂಡಳಿ ಅದರ ವಿರುದ್ಧ ತಡೆ ಆಜ್ಞೆ ತಂದಿರುತ್ತದೆ. ಅದರ ಪರಿಣಾಮದ ಕಾರ್ಮಿಕರ ಕುಂದು ಕೊರತೆ ಹೇಳಲು, ಚರ್ಚಿಸಿ ಬಗೆಹರಿಸಲು ಆಡಳಿತ ಮಂಡಳಿ ಹಿಂದೆಟ್ಟು ಹಾಕುತ್ತಿದೆ. ಅದರ ದುಷ್ಪರಿಣಾಮದಿಂದ ಇಂತಹ ಅಹಿತಕರ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಯುಕ್ತ ಎಲ್ಲ ವಿಷಯದ ಪರಿಹಾರ ಮಾರ್ಗ ಕಾರ್ಮಿಕ ಸಂಘಟನೆಯ ಚುನಾವಣೆ ಆಗಿದೆ. ಆದ್ದರಿಂದ ಕೂಡಲೇ ಆಡಳಿತ ಮಂಡಳಿ ಮಧ್ಯ ಪ್ರವೇಶಿಸಿ ಅಧಿಕೃತವಾಗಿದ್ದ ಕಾರ್ಮಿಕ ಸಂಘಟನೆಗೆ ಚುನಾವಣೆ ನಡೆಸಲು ಅನುಮತಿ, ಸಹಕಾರ ನೀಡುವ ಮೂಲಕ ಮುಂದೆ ಇಂತಹ ಅಹಿತಕರ ಕಹಿ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.