ಕಾರ್ಮಿಕರಿಂದ ಹಣ ವಸೂಲಿ, ಕ್ರಮಕ್ಕೆ ಆಗ್ರಹ

ದಾವಣಗೆರೆ.ಏ.೩೦; ಕೋವಿಡ್ ರೋಗದಿಂದ ಹೈರಾಣಾಗಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘವು ಒತ್ತಾಯಿಸಿದೆ.
ರಾಜಾದ್ಯಂತ ಕೋವಿಡ್ 19 ಮಹಾಮಾರಿಯ ಉಲ್ಬಣದಿಂದ ಹೈರಾಣಾಗಿರುವ ಇಂದಿನ ದಿನಮಾನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಇತರೆ ಅಸಂಘಟಿತ ವಲಯದಲ್ಲಿ ಬರುವ ಬೀದಿ ಬದಿ ವ್ಯಾಪಾರಿಗಳು, ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್ ಚಾಲಕರು, ಹಮಾಲರು, ಟೈಲರ್, ಕ್ಷೌರಿಕರು, ಮಡಿವಾಳರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿ ಇರುವ ಸಮಯವನ್ನೇ ಕೆಲ ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದೆ.
ಇಂತಹ ಕಾರ್ಮಿಕರಿಗೆ, ಶ್ರಮಿಕರಿಗೆ ಕೆಲವರು ಕಾರ್ಮಿಕ ಇಲಾಖೆಯಿಂದ ನಾವುಗಳೇ ಕೋವಿಡ್19ರ ಸಹಾಯಧನವಾಗಿ 20 ಸಾವಿರ ರೂ.ಗಳನ್ನು ಕೊಡಿಸುವುದಾಗಿ ಹೇಳಿ ಅಮಾಯಕ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ಹಲವಾರು ಮಾಹಿತಿಗಳು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆಗೆ ಬಂದಿದ್ದು, ಇಂತಹ ದುಷ್ಠ ವ್ಯಕ್ತಿಗಳ ವಿರುದ್ದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಕಠಿಣ ಶಿಕ್ಷೆ ಒದಗಿಸಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಲಕ್ಷö್ಮಣ್ ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಕೋರಿದ್ದಾರೆ.
ಇದಲ್ಲದೇ ರಾಜ್ಯ ಸರ್ಕಾರ ರೋಗದ ನಿಯಂತ್ರಣಕ್ಕೆ 14 ದಿನಗಳ ಲಾಕ್‌ಡೌನ್ ವಿಧಿಸಿರುವ ಪ್ರಯುಕ್ತ ಕಾರ್ಮಿಕರಿಗೆ ಕೆಲಸಕ್ಕೆ ಅಡ್ಡಿ ಪಡಿಸಬಾರದು. ಅಲ್ಲದೇ ಅವರಿಗೆ ಕಾರ್ಮಿಕ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿ ಬಳಸಿ ಕೆಲಸಕ್ಕೆ ಹಾಜರಾಗಬಹುದು. ಈ ನಿಟ್ಟಿನಲ್ಲಿ ಕಾರ್ಮಿಕರು ಆಶೋಕ ರಸ್ತೆಯಲ್ಲಿನ ಕಾಂಮ್ರೆಡ್ ಪಂಪಾಪತಿ ಭವನದಲ್ಲಿನ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕಚೇರಿಗೆ ಬಂದು ನೊಂದಣಿ ಮಾಡಿಸಿ, ಐಡಿ ಕಾರ್ಡುಗಳನ್ನು ಕಡ್ಢಾಯವಾಗಿ ಬಳಸಬೇಕೆಂದು ಸೂಚನೆ ನೀಡಿದ್ದಾರೆ.
ಇದಲ್ಲದೇ ಬಹುತೇಕ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಇಲಾಖೆಯು ನೀಡಿರುವ ಗುರುತಿನ ಚೀಟಿಗಳನ್ನು ಕಾರ್ಮಿಕರು ಹೊಂದಿದ್ದರೂ ಸಹ ಅವುಗಳು ಪುರಸ್ಕೃತ ಅಲ್ಲ ಎಂದು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಈ ಮೂಲಕ ಕಟ್ಟಡ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಈ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕಾರ್ಮಿಕ ಇಲಾಖೆಯಿಂದ ನೀಡಿರುವ ಐಡಿ ಕಾರ್ಡುಗಳನ್ನೇ ಮಾನ್ಯತೆ ಮಾಡುವ ಮೂಲಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಅಡ್ಡಿಪಡಿಸಬಾರದೆಂದು ಕೋರಿದ್ದಾರೆ.
ಇನ್ನು ದಾವಣಗೆರೆ ಜಿಲ್ಲೆಯಲ್ಲಿ 1.11 ಲಕ್ಷ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಗುರುತಿನ ಚೀಟಿ ನೀಡಿದೆ. ಅದರಲ್ಲೂ ಸುಮಾರು 60 ಸಾವಿರ ಕಾರ್ಡುಗಳು ನಕಲಿಯಾಗಿವೆ. ಕಾರಣ ಇಲಾಖೆ ನಕಲಿ ಕಾರ್ಡುಗಳನ್ನು ತಡೆಗಟ್ಟಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಾರ್ಡು ನೀಡುವಂತೆ ಈಗಾಗಲೇ ಹಲವಾರು ಬಾರಿ ಕಾರ್ಮಿಕ ಇಲಾಖೆಗೆ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದಲ್ಲದೇ ಬೋಗಸ್ ಕಾರ್ಡುಗಳನ್ನು ನೀಡುತ್ತಿರುವ ಏಜೆನ್ಸಿಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೇ ಲಾಕ್‌ಡೌನ್ ಸಂಕಷ್ಟದಲ್ಲೂ ಗುರುತಿನ ಚೀಟಿ ಸಿಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇಂತಹ ವದಂತಿ, ಸುಳ್ಳು ಹೇಳಿಕೆಗಳಿಗೆ ಯಾರೂ ಕಿವಿಗೊಡದೇ ಆಶೋಕ ರಸ್ತೆಯಲ್ಲಿರುವ ಕಾರ್ಮಿಕ ಕಚೇರಿಗೆ ಭೇಟಿ ನೀಡಿ ಗುರುತಿನ ಚೀಟಿಗಳಿಗೆ ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿರುವ ಕಾರ್ಮಿಕರು ಗುರುತಿನ ಚೀಟಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಲಕ್ಷö್ಮಣ್ ಮೊ. 9945394590 ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್, ಮೊ.9901983886, ಕಚೇರಿಯ ದೂರವಾಣಿ ಸಂಖ್ಯೆ 08192-230969ಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ.