ಕಾರ್ಮಿಕರಿಂದ ಜಿಲ್ಲಾಧಿಕಾರಿಗೆ ಮನವಿ

ಚಿತ್ರದುರ್ಗ, ಏ.20: ರಾಜ್ಯದಲ್ಲಿನ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ಅಗತ್ಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಇಂದು  ಸಿಐಟಿಯು ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಸಮಿತಿಯವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯದ ಕಟ್ಟಡ ನಿರ್ಮಾಣವಲಯದ ಕಾರ್ಮಿಕರು ಕೊವೀಡ್ ಸಂಕಷ್ಟಕ್ಕೆ ಸಿಲುಕಿ ಕಳೆದ ಒಂದು ವರ್ಷದಿಂದ ಅನುಭವಿಸುತ್ತಿರುವ ಸಂಕಟಗಳು ಸಾಕಷ್ಟು ಇವೆ. ಲಕ್ಷಾಂತರ ಶ್ರಮಜೀವಿಗಳು ಹಸಿವಿನ ದವಡೆಯಲ್ಲಿ ಇದ್ದಾರೆ. ಆದ್ದರಿಂದ ಅರ್ಜಿ ಸಲ್ಲಿಸಿ ಬಾಕಿರುವ ಒಂದು ಲಕ್ಷ ಕಾರ್ಮಿಕರಿಗೆ ಕೋವಿಡ್ ರೂ ೫೦೦೦ ಪರಿಹಾರ ಕೂಡಲೇ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಹಿಂದೆ ಮದುವೆ ಧನ ಸಹಾಯ ನೀಡಿದವರಿಗೆ ಕೊಡಬೇಕಾಗಿದ್ದ ರೂ ೨೫ ಸಾವಿರ ಮದುವೆ ಬಾಂಡ್ ಎರಡು ವರ್ಷ ಕಳೆದರೂ ನೀಡಲಾಗಿಲ್ಲ. ಈಗ ಮದುವೆ ಬಾಂಡ್ ರದ್ದಾಗಿದೆ ಆದ್ದರಿಂದ ಬಾಕಿ ಇರುವ ಎಲ್ಲ ಫಲಾನುಭವಿಗಳ ಖಾತೆಗೆ ಪೂರ್ತಿಯಾಗಿ ಹಣ ಜಮೆ ಮಾಡಬೇಕು. ಸೇವಾ ಸಿಂಧು ತಂತ್ರಾಂಶ ಸರ್ವರ್ ಸಮಸ್ಯೆ ಗಂಭೀರವಾಗಿದೆ. ಹಾಗಾಗಿ ಮಂಡಳಿಯೇ ಸ್ವತಂತ್ರ ತಂತ್ರಾಂಶವನ್ನು ಅಳವಡಿಸಿಕೊಂಡು ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಬೇಕು. ಈಗ ನೀಡಲಾಗುತ್ತಿರುವ ಕಟ್ಟಡ ಕಾರ್ಮಿಕರ ಪಿಂಚಣಿಯನ್ನು ಕನಿಷ್ಟ ರೂ ೩೦೦೦ ಕ್ಕೆ ಮತ್ತು ಕುಟುಂಬ ಪಿಂಚಣಿಯನ್ನು ರೂ ೨೦೦೦ ಕ್ಕೆ ಹೆಚ್ಚಿಸಬೇಕು. ಮರಣ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇರುವ ಆರು ತಿಂಗಳ ಕಾಲ ಮಿತಿಯನ್ನು ಕನಿಷ್ಟ ಒಂದು ವರ್ಷಕ್ಕೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಸಂಚಾಲಕ ಗೌಸ್ ಪೀರ್ ವಹಿಸಿದ್ದರು.