ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ: ಮಹಿಳೆ ಮೃತ್ಯು ೧೨ ಮಂದಿಗೆ ಗಾಯ: ಮೂವರು ಗಂಭೀರ


ಉಡುಪಿ, ಎ.೫- ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ೧೩ ಮಂದಿ ಗಾಯಗೊಂಡ ಘಟನೆ ರವಿವಾರ ಸಂಜೆ ೭.೩೦ರ ಸುಮಾರಿಗೆ ಬ್ರಹ್ಮಾವರದ ಹೇರೂರು ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ.
ಗಾಯಗೊಂಡ ಎಲ್ಲರೂ ವಲಸೆ ಕಾರ್ಮಿಕರಾಗಿದ್ದು ಕಾಂಕ್ರಿಟ್ ಕೆಲಸ ಮುಗಿಸಿ ಸುಮಾರು ೧೫ ಮಂದಿ ಕಾರ್ಮಿಕರು ವಾಹನದಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಟಯರ್ ಸ್ಫೊಟಗೊಂಡು ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಯಿತ್ತೆನ್ನಲಾಗಿದೆ. ವಾಹನದಲ್ಲಿ ಜನರೇಟರ್, ಕಾಂಕ್ರಿಟ್ ಮಿಕ್ಸಿಂಗ್ ಮೆಷಿನ್ ಕೂಡ ಇತ್ತು ಎಂದು ತಿಳಿದುಬಂದಿದೆ. ಏಕಾಏಕಿ ವಾಹನ ಪಲ್ಟಿಯಾದ್ದರಿಂದ ಹಲವರು ವಾಹನದಡಿಗೆ ಸಿಲುಕಿಕೊಂಡಿದ್ದು, ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅದರಲ್ಲಿ ಗಂಭೀರವಾಗಿ ಗಾಯಗೊಂಡ ೩೫ ವರ್ಷ ವಯಸ್ಸಿನ ಮಹಿಳೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಸ್ಥಳದಲ್ಲಿ ಮಕ್ಕಳು ಹಾಗೂ ಮಹಿಳೆಯರ ಚೀರಾಟ ಮನ ಕಲಕುವಂತಿತ್ತು. ಸ್ಥಳೀಯರು ಹಾಗೂ ಇತರ ವಾಹನ ಸವಾರರು ಅವರನ್ನು ರಕ್ಷಿಸಿ ಅಂಬುಲೆನ್ಸ್ ಹಾಗೂ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಾಯಾಳುಗಳನ್ನು ಉಡುಪಿ ಜಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ೧೨_ಮಂದಿ ದಾಖಲಾಗಿದ್ದು ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಸ್ಪಂದಿಸದ ಪೊಲೀಸ್ ತುರ್ತು ಸ್ಪಂದನಾ ವಾಹನದ ವಿರುದ್ಧ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದರು. ಅಲ್ಲದೆ ಬೇಜವಾಬ್ದಾರಿಯುತವಾಗಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಸಂಬಂಧಪಟ್ಟವರು ಹಾಗೂ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಬ್ರಹ್ಮಾವರ ಪೊಲೀಸರು ಹಾಗೂ ಹೈವೆ ಪಟ್ರೋಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.